ಹಳೆ ವೀಡಿಯೊ ಶೇರ್ ಮಾಡಿ ಯಾವುದು ಸರಿ ಎಂದು ಪ್ರಶ್ನೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಇದೀಗ ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನು ಏಕವಚನದಲ್ಲಿ ಟೀಕಿಸಿದ ವೀಡಿಯೊ ಹಂಚಿಕೊಂಡು ತಿರುಗೇಟು ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಸಿದ್ದರಾಮಯ್ಯ ವೀಡಿಯೊ ಶೆರ್ ಮಾಡಿರುವ ಅನಂತ ಕುಮಾರ್, ಯಾವುದು ಸರಿ, ಯಾವುದು ತಪ್ಪು…ಇದು ಪ್ರಜ್ಞಾವಂತ ಸಮಾಜಕ್ಕೆ ಬಿಟ್ಟ ವಿಷಯ. ನನಗೆ ಬಂದಂತಹ ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಮಾಧ್ಯಮ ಪ್ರತಿನಿಧಿಗಳ ಎದುರು ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ ಮೂರ್ಖ ಎಂದು ಏಕವಚನ ಬಳಸಿ ಮಾತನಾಡಿದ ಹೇಳಿಕೆಯನ್ನು ಹಾಕಿದ್ದಾರೆ.
ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಕುರಿತು, ಹಿ ಇಸ್ ಎ ಫೂಲ್, ಸರ್ಜಿಕಲ್ ಸ್ಟ್ರೈ ಕ್ ಮಾಡಿರುವುದು ಸೈನಿಕರು. ಇವ ಏನು ಗನ್ ತೆಗೆದುಕೊಂಡು ಹೋಗಿದ್ನ, ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಮಹಾ ತಪ್ಪು ಎಂದು ಹೇಳಿಕೆ ನೀಡಿರುವ ವೀಡಿಯೋ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಭಾಷಣವೊಂದರಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠೆಯನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಅನಂತ ಕುಮಾರ್ ಏಕವಚನದಲ್ಲೇ ಟೀಕಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಭಟ್ಕಳದಲ್ಲಿರುವ ಕೆಲವು ಮಸೀದಿಗಳು ಕೂಡ ಹಿಂದೆ ಹಿಂದೂಗಳ ದೇವಾಲಯಗಳಾಗಿದ್ದವು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಕ್ಕೆ ಪೊಲೀಸರು ಅನಂತ ಕುಮಾರ್ ವಿರುದ್ಧ ಕೇಸನ್ನೂ ದಾಖಲಿಸಿಕೊಂಡಿದ್ದಾರೆ.






































