ಕಾರ್ಕಳಕ್ಕೆ ಇನ್ನೊಂದು ಗರಿ ಆನೆಕೆರೆ ಶಿಲಾಮಯ ಚತುರ್ಮುಖ ಬಸದಿ

ಅತ್ಯಂತ ಸುಂದರ, ರಮಣೀಯವಾದ ಪ್ರಕೃತಿಯ ಮಡಿಲಲ್ಲಿ ವಿರಾಜಮಾನವಾಗಿರುವ ಕಾರ್ಕಳ ಚಿಕ್ಕ ಪಟ್ಟಣವಾಗಿದ್ದರೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ… ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹವಾದ ಸಾಧನೆ ಮಾಡಿದ ಹಾಗೂ ಮಾಡುತ್ತಿದೆ. ಇಲ್ಲಿ ಹೆಚ್ಚು ಕರಿಕಲ್ಲುಗಳು, ಬಂಡೆಗಳು ಇರುವ ಕಾರಣ ಕಾರಕಲವೆಂಬ ಹೆಸರು ಬಂತು. ಅದೇ ಕ್ರಮೇಣ ಕಾರ್ಕಳವೆಂದಾಯಿತು. ಇಲ್ಲಿ ಸಮಚಿತ್ತವನ್ನು ಮತ್ತು ವಿಶ್ವ ಶಾಂತಿಯನ್ನು ಸಾರುವ ಗೋಮಟೇಶ್ವರ ವಿಗ್ರಹ, ಹದಿನೆಂಟು ಬಸದಿಗಳು, ಶ್ರೀ ಜೈನ ಮಠ, ಶ್ರೀ ಭುಜಬಲಿ ಬ್ರಹ್ಮಚರ್ಯ ಆಶ್ರಮ, ಶ್ರೀ ಬಾಹುಬಲಿ ಶ್ರಾವಿಕಾಶ್ರಮ, ಶ್ರೀ ಜೈನ ಧರ್ಮ ಜೀರ್ಣೋದ್ಧಾರಕ ಸಂಘ, ದ.ಕ.ಯುವಜನ ಸಂಘ, ಜೈನ್ ಮಿಲನ್, ಯುವ ಜೈನ್ ಮಿಲನ್, ಜಿನವಾಣಿ ಮಹಿಳಾ ಸಮಾಜ, ಪುರೋಹಿತ ಸಂಘ ಮೊದಲಾದ ಧಾರ್ಮಿಕ ಸಂಸ್ಥೆಗಳು ಇವೆ. ಇವು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ.
ಎಂಟು ಶತಮಾನಗಳ ಹಿಂದೆ ಅಂದರೆ ಭೈರವರಸ ವಂಶದವರು ರಾಜ್ಯಭಾರ ಮಾಡುವ ಮೊದಲು ಕಾರ್ಕಳವು ಒಂದು ಹಳ್ಳಿ ಆಗಿತ್ತು. ಭೈರವರಸ ವಂಶದ ಅರಸರೇ 500 ವರ್ಷಗಳ ಆಳ್ವಿಕೆಯಲ್ಲಿ ಕಾರ್ಕಳವನ್ನು ಒಂದು ಐತಿಹಾಸಿಕ ಕ್ಷೇತ್ರವನ್ನಾಗಿ ಮಾಡಿದರು. ಈಗಿರುವ ಇಲ್ಲಿನ ಬಸದಿಗಳು, ದೇವಾಲಯಗಳು ಅವರ ಆಳ್ವಿಕೆಯ ಕಾಲದಲ್ಲಿ ಅಸ್ತಿತ್ವಕ್ಕೆ ಬಂದವುಗಳಾಗಿವೆ.

ಆನೆಕೆರೆ ಬಸದಿ
ಕಾರ್ಕಳದ ಹೃದಯ ಭಾಗದಲ್ಲಿ 26 ಎಕರೆ ವಿಸ್ತೀರ್ಣದಲ್ಲಿ ಶೋಭಿಸುತ್ತಿರುವ ಆನೆಕೆರೆಯನ್ನು 1262ರಲ್ಲಿ ಪಾಂಡ್ಯ ಚಕ್ರವರ್ತಿ ಅಥವಾ ಪಾಂಡ್ಯ ದೇವನು ತನ್ನ ಆನೆಗಳಿಗೆ ನೀರು ಕುಡಿಯಲಿಕ್ಕಾಗಿ ನಿರ್ಮಾಣ ಮಾಡಿಸಿದ್ದನು. ಆದುದರಿಂದ ಈ ಕೆರೆಗೆ ಆನೆಕೆರೆ ಎಂದು ಹೆಸರಾಯಿತು.

ಕಾರ್ಕಳದಲ್ಲಿ ಎರಡು ಚತುರ್ಮುಖ ಬಸದಿಗಳಿವೆ. ಚತುರ್ಮುಖ ಬಸದಿಗಳ ನಿರ್ಮಾಣ ವಿಜಯನಗರದ ಕಾಲದಲ್ಲಿ, ತುಳುನಾಡಿನ ಜೈನ ವಾಸ್ತುಶಿಲ್ಪದಲ್ಲಿ ಪ್ರಾರಂಭವಾದ ಹೊಸ ಸಂಪ್ರದಾಯ. ಎಲ್ಲ ಕಡೆಯಲ್ಲೂ ಶುಭದಾಯಕ ಎಂಬುದನ್ನು ಸೂಚಿಸುವ ಸರ್ವತೋಭದ್ರ ಶೈಲಿಯ ದೇವಾಲಯಗಳಿಗೆ ಚತುರ್ಮುಖ ಬಸದಿಗಳು ಒಂದು ಉತ್ತಮ ನಿದರ್ಶನ.

ಕಾರ್ಕಳದ ವಿಶಾಲವಾದ ಆನೆಕೆರೆಯ ಮಧ್ಯದಲ್ಲಿ ನಿರ್ಮಾಣಗೊಂಡ ಕೆರೆ ಬಸದಿಯೆಂದೇ ಕರೆಯಲ್ಪಡುವ, ಚತುರ್ಮುಖ ಬಸದಿ ಒಂದು ಸರಳ, ಸುಂದರ ಸ್ಮಾರಕ. ಬಸದಿಯ ಅಂಗಳದಲ್ಲಿರುವ ಶಾಸನದ ಪ್ರಕಾರ ಈ ಚತುರ್ಮುಖ ಬಸದಿಯನ್ನು 1545 (16/1/1545)ರಲ್ಲಿ ವೀರ ಪಾಂಡ್ಯಪ್ಪೊಡೆಯನು ನಿರ್ಮಿಸಿದನು. ಈ ಬಸದಿಯ ಗರ್ಭಗೃಹದಲ್ಲಿ ಪೂರ್ವಕ್ಕೆ ಆದಿನಾಥ ಸ್ವಾಮಿ, ಗೋಮುಖ, ಚಕ್ರೇಶ್ವರಿ ಯಕ್ಷ ಯಕ್ಷಿ, ದಕ್ಷಿಣಕ್ಕೆ ಚಂದ್ರನಾಥ ಸ್ವಾಮಿ, ಶ್ಯಾಮ, ಜ್ವಾಲಾಮಾಲಾ ಯಕ್ಷ, ಯಕ್ಷಿ, ಪಶ್ಚಿಮಕ್ಕೆ ಶಾಂತಿನಾಥ ಸ್ವಾಮಿ, ಗರುಡ, ಮಹಾಮಾನಸಿ ಯಕ್ಷ ಯಕ್ಷಿ ಹಾಗೂ ಉತ್ತರ ದಿಕ್ಕಿಗೆ ಮಹಾವೀರ ಸ್ವಾಮಿ, ಮಾತಂಗ, ಸಿದ್ದಾಯಿನಿ ಯಕ್ಷ ಯಕ್ಷಿ ವಿಗ್ರಹಗಳು ಇವೆ.

ಸುಮಾರು 2015ರಿಂದ ಸನ್ಮಿತ್ರ ಸಂಸ್ಥೆಯು ಇತರ ಜೈನ ಧರ್ಮದ ಸಂಸ್ಥೆಗಳ ಸಹಯೋಗದಲ್ಲಿ ಅಖಂಡ ಣಮೋಕಾರ ಮಂತ್ರ ಪಠಣ ಅಂದರೆ ನಿರಂತರ 24 ಗಂಟೆಗಳ ಕಾಲ ಪಂಚಣಮೋಕಾರ ಮಂತ್ರ ಪಠಣದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದು ಸುಮಾರು ಐದು ವರ್ಷಗಳವರೆಗೆ ನಡೆದುಕೊಂಡು ಬಂದಿತ್ತು. ಇಡೀ ಕಾರ್ಕಳ ತಾಲೂಕಿನ ಜೈನ ಬಂಧುಗಳು ಶ್ರದ್ಧಾಭಕ್ತಿಯಿಂದ ಇದರಲ್ಲಿ ಭಾಗವಹಿಸಿದ್ದರು. ನಂತರ ಶ್ರೀ 108 ವೀರಸಾಗರ ಮುನಿ ಮಹಾರಾಜರ ಚಾತುರ್ಮಾಸ್ಯವು ಕಾರ್ಕಳದಲ್ಲಿ ನಡೆಯಿತು. ಆಗ ಒಂದು ದಿನ ಮುನಿ ಮಹಾರಾಜರು ಆನೆಕೆರೆ ಬಸದಿಯ ದರ್ಶನ ಮಾಡಿದರು. ಗರ್ಭಗೃಹದ ನಾಲ್ಕು ತೀರ್ಥಂಕರರ ದರ್ಶನ ಪಡೆದು ಮೇಲಿನ ನೆಲೆಗೆ ಹೋಗಬೇಕೆನ್ನುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆಗ ಪುರೋಹಿತರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದರು (ಸುನಿಲ್ ಇಂದ್ರರು). ಆದರೆ ಮುನಿಗಳು ತನ್ನ ಪಟ್ಟನ್ನು ಬಿಡಲಿಲ್ಲ. ಕೊನೆಗೆ ಗುರುಭಕ್ತರಾದ ಚಂದ್ರಣ್ಣನವರು ಏಣಿಯನ್ನು ತಂದರು. ಏಣಿ ಹತ್ತಿ ಮಹಾರಾಜರು ಮೇಲಿನ ನೆಲೆಗೆ ಹೋದಾಗ ಅಲ್ಲಿ ಪಾಣಿಪೀಠ ಇದ್ದುದನ್ನು ಗಮನಿಸಿದರು. ಆಗಲೇ ಮುನಿ ಮಹಾರಾಜರು “ಇಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಮೂರ್ತಿ ಮೊದಲು ಇತ್ತು, ಈಗ ಯಾವುದೋ ಕಾರಣದಿಂದ ಕಾಣೆಯಾಗಿದೆ. ಅದಕ್ಕೆ ಸರಿಯಾದ ವ್ಯವಸ್ಥೆಯನ್ನು ಮಾಡಬೇಕೆಂದು” ಹೇಳಿದ್ದರಂತೆ. ಬೇರೆ ಬೇರೆ ಮೂಲಗಳಿಂದ ಕೂಡಾ ಇದೇ ವಿಚಾರಗಳು ತಿಳಿದು ಬಂದಿದ್ದವು.

ನಂತರ ಧರ್ಮ ದೇವತೆಗಳಿಗೆ ಸರಿಯಾದ ವ್ಯವಸ್ಥೆ ಮಾಡಿ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿತು. ಈ ಮಹತ್ತರವಾದ ಕಾರ್ಯದಲ್ಲಿ ಒಂದು ಯುವ ಪಡೆಯು ಕಾರ್ಯ ಸನ್ನದ್ಧವಾಯಿತು. ಆರಂಭಿಕ ಹಂತದಲ್ಲಿ ಅನೇಕ ಎಡರು ತೊಡರುಗಳನ್ನು ಎದುರಿಸಿದರು. ಅವರೆಲ್ಲರ ಶ್ರಮದ ಫಲವಾಗಿ ಕಾರ್ಕಳ ನಗರಿಗೆ ಕಲಶ ಪ್ರಾಯದಂತೆ ಶೋಭಿಸುತ್ತಿದ, ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ ಆನೆಕೆರೆ ಚತುರ್ಮುಖ ಬಸದಿ. 108 ಯುಗಲ ಮುನಿಗಳ ಪಾವನ ಸಾನಿಧ್ಯ ಮತ್ತು ಮಾರ್ಗದರ್ಶನ, ರಾಜಗುರು ಧ್ಯಾನ ಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಜೈನ ಮಠ ಕಾರ್ಕಳ ಇವರ ನೇತೃತ್ವದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಯ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ನಾಯಕತ್ವದಲ್ಲಿ, ಶಾಸಕ ವಿ.ಸುನಿಲ್ ಕುಮಾರ್ ಸಹಕಾರದೊಂದಿಗೆ ಹಾಗೂ ಊರ ಪರವೂರ ಸಮಸ್ತ ಭಕ್ತರ ಸಹಕಾರದಿಂದ ಸಂಪೂರ್ಣ ಶಿಲಾಮಯವಾಗಿ ಶೋಭಿಸುತ್ತಿದೆ ಆನೆಕೆರೆ ಚತುರ್ಮುಖ ಬಸದಿ

ಬಸದಿಯ ಧಾಮ ಸಂಪ್ರೋಕ್ಷಣಾ ಮಹೋತ್ಸವ ಹಾಗೂ ಮೇಗಿನ ನೆಲೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಕಲ್ಯಾಣ ಮಹೋತ್ಸವವು ಜ. 18ರಿಂದ ಪ್ರಾರಂಭವಾಗಿ 22ವರೆಗೆ ನಡೆಯಲಿದೆ. ಭಕ್ತಾದಿಗಳೆಲ್ಲ ಈ ಐದು ದಿವಸಗಳ ಪೂಜಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧನ್ಯರಾಗೋಣ.

ಮಾಲತಿ ವಸಂತರಾಜ್, ಕಾರ್ಕಳ































































































error: Content is protected !!
Scroll to Top