ಕಾರ್ಮಿಕರ ಜತೆ ಫೋನಿನಲ್ಲಿ ಮಾತನಾಡಿದ ಪ್ರಧಾನಿ
ಹೊಸದಿಲ್ಲಿ : ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹರ್ಷ ವ್ಯಕ್ತಪಡಿಸಿದ್ದಾರೆ. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ತಾಳ್ಮೆ, ಧೈರ್ಯವನ್ನು ಕೊಂಡಾಡಿ ಟ್ವೀಟ್ ಮಾಡಿರುವ ಮೋದಿ, ಇದೊಂದು ಭಾವುಕ ಕ್ಷಣ ಎಂದು ಬಣ್ಣಿಸಿದ್ದಾರೆ. ಅಲ್ಲದೆ, 17 ದಿನಗಳ ನಂತರ ತಮ್ಮವರನ್ನು ಕಾಣುತ್ತಿರುವ ಕಾರ್ಮಿಕರಿಗೆ ಶುಭ ಕೋರಿದ್ದಾರೆ.
ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿ ಕಾರ್ಮಿಕರನ್ನು ಎನ್ಡಿಆರ್ಎಫ್ ಸಿಬ್ಬಂದಿ 17 ದಿನಗಳ ಕಾರ್ಯಾಚರಣೆ ಬಳಿಕ ಸೋಮವಾರ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ.
‘ಉತ್ತರಕಾಶಿಯಲ್ಲಿ ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದ ಸ್ನೇಹಿತರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದೀರ್ಘಾವಧಿಯ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಪ್ರಶಂಸಿಸಿದಷ್ಟೂ ಸಾಲದು. ಈ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಜನರಿಗೆ ನಾನು ನಮಸ್ಕರಿಸುತ್ತೇನೆ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಟೀಮ್ ವರ್ಕ್ನ ಅದ್ಭುತ ಉದಾಹರಣೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಂತರ ರಕ್ಷಿಸಲ್ಪಟ್ಟ 41 ಕಾರ್ಮಿಕರೊಂದಿಗೆ ದೂರವಾಣಿ ಮೂಲಕ ಮೋದಿ ಮಾತುಕತೆ ನಡೆಸಿದರು. ಒಂದೇ ಕಡೆಯಿದ್ದ ಎಲ್ಲ ಕಾರ್ಮಿಕರ ಬಳಿ ಮಾತನಾಡಿ, ಆರೋಗ್ಯ ವಿಚಾರಿಸಿದ್ದಾರೆ.









































