ಐದು ತಿಂಗಳಲ್ಲಿ 300ಕ್ಕೂ ಅಧಿಕ ಜನರಿಂದ ಹಣ ಲಪಟಾಯಿಸಿದ್ದ ಖದೀಮರು
ಬೆಂಗಳೂರು : ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ 40 ಕೋಟಿ ರೂ.ಗೂ ಅಧಿಕ ಮೊತ್ತ ವಸೂಲಿ ಮಾಡಿ ವಂಚಿಸಿದ್ದ ನಾಲ್ವರು ಖದೀಮರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಸೈಯದ್ ಯೂನಸ್ ಫಾಜಿಲ್ ಅಲಿಯಾಸ್ ಮುದಾಸಿರ್, ಭಾರತಿನಗರದ ಮೊಹಮ್ಮದ್ ಕಲೀಮುಲ್ಲಾ, ಬನಶಂಕರಿ ಹತ್ತಿರದ ಕಾವೇರಿನಗರದ ಸೈಯದ್ ಅರ್ಬಾಜ್ ಹಾಗೂ ಫ್ರೇಜರ್ ಟೌನ್‌ನ ಇಬ್ರಾಹಿಂ ಕರ್ನೂಲ್ ಬಂಧಿತರಾಗಿದ್ದು, ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 60 ಲಕ್ಷ ರೂ.ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು, ಸಿಮ್‌ಕಾರ್ಡ್‌ಗಳು ಹಾಗೂ ವಿವಿಧ ಕಂಪನಿಗಳ ಸೀಲ್‌ಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಹುಸೇನ್ ಹಾಗೂ ಮೊಯಿನ್ ಎಂಬವರ ಪತ್ತೆಗೆ ತನಿಖೆ ಮುಂದುವರಿದಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ಪಾರ್ಟ್‌ಟೈಮ್ ಜಾಬ್ ಹೆಸರಿನಲ್ಲಿ 88 ಸಾವಿರ ರೂ. ಕಳೆದುಕೊಂಡ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ಪೂಜಾ ಸಾವಂತ್ ಎಂಬವರು ದೂರು ನೀಡಿದ್ದರು. ಡಿಸಿಪಿ ಲಕ್ಷ್ಮೀಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಬ್ಯಾಂಕ್ ಖಾತೆಗಳ ವಿವರ ಬೆನ್ನುಹತ್ತಿ ವಂಚಕರನ್ನು ಸೆರೆ ಹಿಡಿದಿದೆ.
ಆನ್‌ಲೈನ್ ಮೂಲಕ ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ಪ್ರಕಟಿಸಿ ಜನರಿಗೆ ವಿವಿಧ ಟಾಸ್ಕ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ಹೇಳಿ ಆರೋಪಿಗಳು ಹಣ ವಸೂಲಿ ಮಾಡಿದ್ದರು. ತಾವು ನೀಡುವ ವಿವಿಧ ಪ್ರಾಡಕ್ಟ್‌ಗಳನ್ನು ಖರೀದಿ ಮಾಡಿದರೆ ಲಾಭ ಬರುವುದಾಗಿ ನಂಬಿಸಿ ಕೂಡ ಜನರಿಂದ ಹಣ ಸುಲಿಗೆ ಮಾಡಿದ್ದರು. ಹೀಗೆ 304 ಜನರಿಂದ 40 ಕೋಟಿ ರೂ. ಲಪಟಾಟಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆನ್‌ಲೈನ್ ವಂಚನೆ ಕೃತ್ಯದಲ್ಲಿ ಗಳಿಸಿದ ಹಣವನ್ನು ದೋಚಲು ಅನ್ಯರ ಹೆಸರಲ್ಲಿ ಚಾಲ್ತಿ ಖಾತೆಗಳನ್ನು ಆರೋಪಿಗಳು ತೆರೆದಿದ್ದರು. ಇದಕ್ಕಾಗಿ ಅಂಗಡಿಗಳನ್ನು ಬಾಡಿಗೆ ಪಡೆದು ನಕಲಿ ಕರಾರು ಪತ್ರಗಳನ್ನು ಸೃಷ್ಟಿಸಿ ಆ ಅಂಗಡಿಗಳಿಗೆ ವಿವಿಧ ಕಂಪನಿಗಳ ಹೆಸರುಗಳನ್ನಿಟ್ಟು ಯೂನಸ್, ಕಲೀಮುಲ್ಲಾ ಹಾಗೂ ಅರ್ಬಾಜ್ ಚಾಲ್ತಿ ಖಾತೆಗಳನ್ನು ತೆರೆಯುತ್ತಿದ್ದರು. ಈ ಬ್ಯಾಂಕ್ ಖಾತೆಗಳಿಗೆ ಮೊಬೈಲ್ ನಂಬರನ್ನು ಲಿಂಕ್ ಮಾಡಲು ಅಗತ್ಯವಿದ್ದ ಸಿಮ್‌ಗಳನ್ನು ಫ್ರೇಜರ್ ಟೌನ್‌ನ ಮೊಬೈಲ್ ಅಂಗಡಿ ಮಾಲಿಕ ಇಬ್ರಾಹಿಂ ಪೂರೈಸುತ್ತಿದ್ದ. ಯಾವುದೇ ದಾಖಲಾತಿಗಳನ್ನು ಪಡೆಯದೆ ಸಾರ್ವಜನಿಕರು ನೀಡಿದ್ದ ದಾಖಲೆಗಳನ್ನು ನಕಲು ಮಾಡಿ ತನ್ನ ಸಹಚರರಿಗೆ ಆತ ಸಿಮ್ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಹುಸೇನ್ ಈ ಕೃತ್ಯದ ಕಿಂಗ್‌ಪಿನ್ ಆಗಿದ್ದು, ದುಬೈನಲ್ಲೇ ಕುಳಿತೇ ಸೈಬರ್ ವಂಚನೆಯಲ್ಲಿ ಆತ ತೊಡಗಿದ್ದಾನೆ. ತನ್ನ ಸಹಚರ ಮೊಹಿನ್ ಮೂಲಕ ಇನ್ನುಳಿದ ಆರೋಪಿಗಳನ್ನು ಹುಸೇನ್ ಪರಿಚಯಿಸಿಕೊಂಡಿದ್ದ. ಬ್ಯಾಂಕ್ ಖಾತೆಗಳನ್ನು ತೆರೆಯಲು ತಲಾ ಖಾತೆಗೆ 75 ಸಾವಿರ ರೂ. ಹಾಗೂ ತಲಾ ಸಿಮ್‌ಕಾರ್ಡ್‌ಗೆ 500 ರೂ. ಹುಸೇನ್ ಕೊಡುತ್ತಿದ್ದ. ತಿಂಗಳಿಗೊಮ್ಮೆ ದುಬೈನಿಂದ ನಗರಕ್ಕೆ ಬಂದು ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿ ಆತ ಮರಳುತ್ತಿದ್ದ. ಬಳಿಕ ಈ ಮಾಹಿತಿ ಪಡೆದು ಆತ ವಂಚನೆ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ವಂಚನೆ ಕೃತ್ಯದ ಆರೋಪಿಗಳಿಂದ 30 ಬ್ಯಾಂಕ್ ಖಾತೆಗಳ ವಿವರ ಸಿಕ್ಕಿದ್ದು, ಅದರಲ್ಲಿ 26 ಖಾತೆಗಳಲ್ಲಿ 40 ಕೋಟಿ ರೂ. ವರ್ಗಾವಣೆ ನಡೆದಿರುವ ಮಾಹಿತಿ ಸಿಕ್ಕಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಆರೋಪಿಗಳು ಈ ವಂಚನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.









































