ಸಂಭ್ರಮದ 68ನೇ ಕನ್ನಡ ರಾಜ್ಯೋತ್ಸವ : ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ – ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಕಂಠೀರವ ಕ್ರೀಡಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ನಡೆಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರು ನೀಡುವುದಾಗಿ ಘೋಷಿಸಿದರು.

ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಸಂಭ್ರಮಿಸಬೇಕು
ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಇಂದಿನಿಂದ ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ನಾವು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಕೇಂದ್ರ ಸರಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು. ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಉದಾಹರಣೆ ನೀಡಿದರು.

ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು. ಅಗತ್ಯವಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನಮ್ಮ ಸರಕಾರದ ಆದ್ಯತೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು, ಶಿಕ್ಷಣ ಇಲಾಖೆ ಕೆಲಸ ಮಾಡಬೇಕಿದೆ. ಕನಿಷ್ಠ ಎಸ್​ಎಸ್​ಎಲ್‌ಸಿಯವರೆಗಾದರೂ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು. ಸರಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್, ಕುಡಿಯುವ ನೀರು ಕೊಡುವಂತೆ ಒತ್ತಾಯ ಮಾಡಿದ್ದಾರೆ. ಎಲ್ಲ ಸರಕಾರಿ ಶಾಲೆಗಳಲ್ಲೂ ಇಂದಿನಿಂದ ಉಚಿತವಾಗಿ ವಿದ್ಯುತ್, ಕುಡಿಯುವ ನೀರು ನೀಡುತ್ತೇವೆ ಎಂದರು.

ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಜಾರಿಗೊಳಿಸಿದ್ದೇವೆ. 86 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಅಡಿಯಲ್ಲಿ 1.28 ಲಕ್ಷ ಕುಟುಂಬಗಳಿಗೆ ಅಕ್ಕಿ ಬದಲಿಗೆ ತಲಾ 170 ರೂ. ನೀಡಲಾಗಿದೆ. ಗೃಹಜ್ಯೋತಿ‌ ಅಡಿಯಲ್ಲಿ 1 ಕೋಟಿ 38 ಲಕ್ಷ ಮನೆಗಳಿಗೆ ಈ ಯೋಜನೆ ತಲುಪಿದೆ. ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 1.7 ಕೋಟಿ ಮಹಿಳೆಯರಿಗೆ ಹಣ ನೀಡಿದ್ದೇವೆ. ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದೇವೆ. ಹಿಂದಿನ ನಮ್ಮ ಸರ್ಕಾರದಿಂದಲೂ ಈ ಯೋಜನೆ ಮುಂದುವರೆಸುತ್ತಾ ಬಂದಿದ್ದೇವೆ. ಮಕ್ಕಳು ಸ್ವಾಭಿಮಾನದಿಂದ ಬೆಳೆಯುವ ವಾತಾವರಣ ನಿರ್ಮಾಣ ಮಾಡೋಣ ಎಂದು ಹೇಳಿದರು.

ಬಳಿಕ ಮಾತನಾಡಿ, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಕನ್ನಡ ರಾಜ್ಯೋತ್ಸವದ 50 ರ ಸಂಭ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಘೋಷಣೆ ಮಾಡಲಾಗಿದೆ. ನಮ್ಮ ಇಲಾಖೆಯಿಂದ 13,000 ಶಿಕ್ಷಕರ ನೇಮಕ ಮಾಡಲಾಗಿದೆ. ಇನ್ನು ಅಗತ್ಯ ಇರುವ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಶಾಲೆಯ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 8,0311 ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 600 ಕನ್ನಡ ಪಬ್ಲಿಕ್ ಶಾಲೆ ಸ್ಥಾಪನೆಯ ಉದ್ದೇಶ ಹೊಂದಲಾಗಿದೆ. ಸಸ್ಯ ಶ್ಯಾಮಲಾ ಕಾರ್ಯಕ್ರಮದ ಮೂಲಕ 50 ಸಾವಿರ ಸಸಿಗಳನ್ನು ನೆಡಲಾಗುವುದು. ಮಕ್ಕಳ ಬ್ಯಾಗ್ ಹೊರೆಯನ್ನು ಶೇ. 50 ರಷ್ಟು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಕನ್ನಡ ಭಾಷೆಯ ಮೇಲಿನ ಅಭಿಮಾನ ಕೇವಲ ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗದಿರಲಿ ಎಂದು ಹೇಳಿದರು. ಕರ್ನಾಟಕ ಮತ್ತು ಕನ್ನಡ ಭೂಮಿ ನಮಗೆ ಸ್ವರ್ಗ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಲಕ್ಷಾಂತರ ಜನರನ್ನು ನೆನೆಯಬೇಕು. ಕನ್ನಡವನ್ನು ಮರೆತರೆ ತಾಯಿಯನ್ನು ಮರೆತಂತೆ ಎಂದು ಹೇಳಿದರು. ಕನ್ನಡಿಗರಾದ ನಮಗೆ ಅಧಿಕೃತ ಧ್ವಜ ಬೇಕು. ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.





























































































error: Content is protected !!
Scroll to Top