ಇ.ಡಿ.ಗೆ ಬರೆದ ಪತ್ರದಲ್ಲಿ ಸ್ವಾಮೀಜಿ ಹೆಸರು ಪ್ರಸ್ತಾವಿಸಿದ್ದ ಚೈತ್ರಾ
ಮಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತಿತರರು ಕೆಲವರು ಸೇರಿಕೊಂಡು ಕೋಟ್ಯಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದೇಹಿ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆದಿದ್ದಳು. ಈ ಪತ್ರದಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ಹೆಸರನ್ನು ಸಹ ಚೈತ್ರಾ ಪ್ರಸ್ತಾಪ ಮಾಡಿದ್ದಾಳೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ವಜ್ರದೇಹಿ ಶ್ರೀಗಳಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಹಾಗೂ ಅಭಿನವ ಹಲಶ್ರೀ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೈಗಾರಿಕೋದ್ಯಮಿ ಹಾಗೂ ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಆರೋಪಿಗಳು 5 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ.


































