ಆರೋಗ್ಯ ಧಾರಾ-ಔಷಧ ಸೇವನೆ ಸಮಯದ ಮಹತ್ವ

ರೋಗಿಗೆ ಔಷಧ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಔಷಧವನ್ನು ಸೇವಿಸುವ ಕಾಲವಿರುತ್ತದೆ. ಒಂದೇ ಔಷಧಿ ಬೆಳಗ್ಗೆ ಕೊಟ್ಟಾಗ ಅದರ ಪರಿಣಾಮ ಬೇರೆ ಇರುತ್ತದೆ ರಾತ್ರಿ ನೀಡಿದಾಗ ಬೇರೆ ಪರಿಣಾಮವಿರುತ್ತದೆ. ಅದು ಮಾತ್ರವಲ್ಲದೆ ಔಷಧದ ಜತೆ ಏನನ್ನು ಸೇರಿಸಿ ತೆಗೆದುಕೊಳ್ಳುತ್ತೇವೆ ಎನ್ನುವುದು ಕೂಡ ಆಯುರ್ವೇದದಲ್ಲಿ ಮುಖ್ಯ.
ರೋಗದ ಪರಿಸ್ಥಿತಿಯನ್ನು ಪರೀಕ್ಷಿಸಿ ಔಷಧವನ್ನು ನೀಡುತ್ತೇವೆ. ಆ ಔಷಧ ಸರಿಯಾಗಿ ಕೆಲಸ ಮಾಡಬೇಕಾದರೆ ಯಾವ ಸಮಯದಲ್ಲಿ ಯಾವುದರ ಜತೆ ಸೇವಿಸಬೇಕೆಂದು ಆಯುರ್ವೇದದಲ್ಲಿ ತಿಳಿಸಿದೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಆಯುರ್ವೇದಚಾರ್ಯರು ಇಷ್ಟೆಲ್ಲಾ ಜ್ಞಾನ ನೀಡಿರುವುದು ಜಗತ್ತಿಗೆ ಕೊಟ್ಟ ವರದಾನವೆನ್ನಬಹುದು.

ಆಯುರ್ವೇದದಲ್ಲಿ 11 ಔಷಧ ಸೇವನೆ ಕಾಲವನ್ನು ವಿವರಿಸಿದ್ದಾರೆ

1.ಅಭಕ್ತ ಕಾಲ-ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಔಷಧ ಸೇವನೆ ಮಾಡುವುದು. ಸಾಮಾನ್ಯವಾಗಿ ಇದನ್ನು ಕಫಜ ರೋಗಗಳಲಿ ನೀಡುತ್ತಾರೆ. ರೋಗಿಯ ದೇಹ ಬಲ ಉತ್ತಮವಿದ್ದರೆ ಮಾತ್ರ ಇದರ ಸೇವನೆ. ಅಜೀರ್ಣ, ಉಪವಾಸ ಮಾಡಿದವರು, ದುರ್ಬಲರು ಖಾಲಿ ಹೊಟ್ಟೆಯಲ್ಲಿ ಔಷಧ ಸೇವಿಸುವುದು ನಿಷೇಧಿಸಿದೆ.

2.ಪ್ರಾಗ್ಭಕ್ತ ಕಾಲ- ಆಹಾರ ಸೇವನೆಗೆ ಮೊದಲು ಔಷದ ಸೇವನೆ ಮಾಡುವುದು. ಔಷದ ಸೇವನೆಯ ಸ್ವಲ್ಪ ಹೊತ್ತಿನಲ್ಲಿ ಆಹಾರ ಸೇವನೆ ಮಾಡೋದು. ಇದನ್ನು ಅಪಾನವಾಯು ವಿಕೃತಿಯಲ್ಲಿ ನೀಡಲಾಗುತ್ತದೆ.

3.ಮಧ್ಯಭಕ್ತ ಕಾಲ-ಆಹಾರ ಸೇವನೆಯ ಮಧ್ಯದಲ್ಲಿ ಔಷಧ ನೀಡುವುದು. ಸಮಾನ ವಾಯುವಿನ ವಿಕೃತಿ ಹಾಗೂ ಪಿತ್ತಜನ್ಯ ರೋಗಗಳಲ್ಲಿ ಇದನ್ನು ಅನುಸರಿಸುತ್ತಾರೆ.

4.ಅಧೊಭಕ್ತ ಕಾಲ- ಭೋಜನ ಸೇವನೆಯ ನಂತರ ಔಷಧ ಸೇವಿಸುವುದು. ಇದರ ಪ್ರಯೋಗವು ವ್ಯಾನ ವಾಯು ವಿಕೃತಿಯಲ್ಲಿ ಬೆಳಗ್ಗೆ ಆಹಾರ ಸೇವನೆಯ ನಂತರ ಹಾಗು ಉದಾನವಾಯು ವಿಕೃತಿಯಲ್ಲಿ ಸಾಯಂಕಾಲ ಭೋಜನದ ನಂತರ ಔಷಧವನ್ನು ಸೇವಿಸುವುದು. ಶರೀರಕ್ಕೆ ಬಲ ನೀಡುವಾಗ ಹಾಗೂ ಕಫಜನ್ಯ ರೋಗಗಳಲ್ಲಿಯೂ ಕೂಡ ಇದನ್ನು ನೀಡಲಾಗುವುದು.

5.ಸಮಭಕ್ತ ಕಾಲ- ಆಹಾರದ ಜತೆ ಔಷಧ ಸೇವಿಸುವುದು. ಇದನ್ನು ಸಭಕ್ತ ಎಂದು ಕೂಡ ಕರೆಯುತ್ತಾರೆ. ಈ ರೀತಿ ಸೇವನೆಯು ಬಾಲಕ ಬಾಲಕಿಯರು ಹಾಗೂ ಸುಕುಮಾರರಿಗೆ ಅನುಸರಿಸಲಾಗುವುದು.

6.ಅಂತರ್ಭಕ್ತ ಕಾಲ-ಎರಡು ಭೋಜನದ ಮಧ್ಯದ ಕಾಲದಲ್ಲಿ ಔಷಧ ನೀಡುವುದು. ಬೆಳಗ್ಗೆ ಆಹಾರ ಜೀರ್ಣವಾದ ಮೇಲೆ ಔಷದ ನೀಡಲಾಗುವುದು. ಔಷಧ ಜೀರ್ಣವಾದ ಮೇಲೆ ಮಧ್ಯಾಹ್ನದ ಊಟ ಮಾಡುವುದು. ಇದರ ಪ್ರಯೋಗವು ವ್ಯಾನ ವಾಯುಜನ್ಯ ರೋಗಗಳಲ್ಲಿ ಮಾಡಲಾಗುವುದು.

7.ಸಾಮುದ್ಗ ಕಾಲ-ಆಹಾರ ಸೇವನೆಯ ಮೊದಲು ಹಾಗೂ ಆಹಾರ ಸೇವನೆಯಾದ ನಂತರ ಎರಡು ಬಾರಿ ಔಷಧ ಸೇವಿಸುವುದು. ಬಿಕ್ಕಳಿಕೆ, ಶ್ವಾಸಕೋಶದ ರೋಗಗಳಲ್ಲಿ ಹೀಗೆ ನೀಡಲಾಗುವುದು.

8.ಮುಹುರ್ ಮುಹುರ್ ಕಾಲ-ಆಗಾಗ ಔಷಧವನ್ನು ನೀಡುವುದು. ಅತಿ ಬಾಯಾರಿಕೆ, ಬಿಕ್ಕಳಿಗೆ, ಅಸ್ತಮ, ವಿಷ ಸೇವಿಸಿದಾಗ ಹೀಗೆ ನೀಡಲಾಗುವುದು.

9.ಪ್ರಾಗ್ರಾಸ-ಆಹಾರದ ಮೊದಲ ತುತ್ತಿನೊಂದಿಗೆ ಔಷಧ ಸೇವಿಸುವುದು. ಪಚನ ಸಂಬಂಧ ರೋಗಗಳಲ್ಲಿ ಇದನ್ನು ನೀಡಲಾಗುವುದು.

10.ಗ್ರಾಸ್ ಅಂತರ-ಆಹಾರ ಸೇವಿಸುವ ಎರಡು ತುತ್ತುಗಳ ಮಧ್ಯದಲ್ಲಿ ಔಷಧ ಸೇವನೆ. ಹೃದಯ ರೋಗಗಳಲ್ಲಿ, ಶ್ವಾಸಕೋಶದ ರೋಗಗಳಲ್ಲಿ ಇಂತಹ ಕ್ರಮವನ್ನು ಅನುಸರಿಸುತ್ತಾರೆ.

11.ನಿಶಾ ಕಾಲ-ರಾತ್ರಿಯಲ್ಲಿ ಔಷದ ಸೇವನೆ. ಕಣ್ಣು ಕಿವಿ ಮೂಗಿನ ರೋಗಗಳಲ್ಲಿ, ಮಾನಸಿಕ ರೋಗಗಳಲ್ಲಿ ರಾತ್ರಿ ಊಟವಾದ ಬಳಿಕ ಔಷಧವನ್ನು ನೀಡಲಾಗುವುದು.







































































error: Content is protected !!
Scroll to Top