ಪ್ರತಿಭಟನೆಕಾರರ ಬಂಧನ, ಸಿಎಂ ನಿವಾಸಕ್ಕೆ ಸರ್ಪಗಾವಲು, ಎಲ್ಲೆಡೆ ಪೊಲೀಸರ ಕಟ್ಟೆಚ್ಚರ
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕನ್ನಡಪರ ಹಾಗೂ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಬೆಳಗ್ಗಿನಿಂದಲೇ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು ಮತ್ತಿತರೆಡೆಗಳಲ್ಲಿ ಬೆಳಗ್ಗೆಯೇ ರೈತರು ಮತ್ತು ಪ್ರತಿಭಟನೆಕಾರರು ಬೀದಿಗಿಳಿದಿದ್ದಾರೆ. ಈ ಬಂದ್ಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿವೆ. ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈಗಾಗಲೆ ಪೊಲೀಸರು ಬಂದೋಬಸ್ತ್ಗೆ ಫೀಲ್ಡ್ಗೆ ಇಳಿದಿದ್ದಾರೆ.
ತುಮಕೂರು ನಗರದ ಟೌನ್ ಹಾಲ್ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ.ಎಂ ಎಂ.ಕೆ ಸ್ಟಾಲಿನ್ ಭಾವಚಿತ್ರಕ್ಕೆ ತುಳಿದು, ಬೆಂಕಿ ಹಚ್ಚಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತಂದೆಯೊಂದಿಗೆ ಸೇರಿ 9 ವರ್ಷದ ಬಾಲಕ ಸಹಿತ ಭಾಗಿಯಾಗಿದ್ದಾನೆ. ಬಾಲಕ ಮೂರನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾನೆ. ಬಾಲಕ ಚಂದನ್ ಕನ್ನಡ ಪರ ಸಂಘಟನೆಯ ಕಾರ್ಯಕರ್ತರ ಜತೆ ಸೇರಿ ಹೋರಾಟ ನಡೆಸುತ್ತಿದ್ದಾನೆ.
ಮಂಡ್ಯ ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತ ಕೈ ಕೊಯ್ದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಹೋರಾಟಗಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುಲು ಯತ್ನಿಸಿದಾಗ ಹೋರಾಟಗಾರ ಶ್ರೀನಿವಾಸ್ ಆಸ್ಪತ್ರೆಗೆ ಹೋಗಲು ನಿರಾಕರಿಸಿದರು. ಈ ವೇಳೆ ಪೊಲೀಸರು ಗಾಯ ಮಾಡಿಕೊಂಡು ಪ್ರತಿಭಟನೆ ಮಾಡಬೇಡಿ. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಕರುನಾಡ ಕಾರ್ಮಿಕ ಸಂಘಟನೆ ಕೆ.ಆರ್ ಮಾರುಕಟ್ಟೆಯಲ್ಲಿ ಕಿವಿಗೆ ಚೆಂಡು ಹೂ ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುವುದಕ್ಕೆ ಶುರುಮಾಡುತ್ತಿದ್ದಂತೆ ಅಲರ್ಟ್ ಆದ ಪೋಲಿಸರು, ಪ್ರತಿಭಟಿಸಿತ್ತಿದ್ದವರನ್ನ ಕೆ.ಆರ್ ಮಾರುಕಟ್ಟೆಯಿಂದ ಹೊರ ಕಳುಹಿಸಿದರು.
ಕೋಲಾರದಲ್ಲಿ ಪ್ರತಿಭಟನಾಕಾರರು ಬೈಕ್ ರ್ಯಾಲಿ ಮಾಡಲಿದ್ದಾರೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ್ ವೃತ್ತದಿಂದ ಬೈಕ್ ರ‍್ಯಾಲಿ ಆರಂಭವಾಗಲಿದೆ. ನಿಲ್ದಾಣದಲ್ಲಿ ಬಂದ್ಗೆ ಬೆಂಬಲಿಸುವಂತೆ ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಮನವಿ ಸಲ್ಲಿಸಿದ್ದಾರೆ. ನಗರದಾದ್ಯಂತ ಮೆಕ್ಕೆ ವೃತ್ತ, ಎಂ.ಜಿ.ರಸ್ತೆ, ಡೂಂಲೈಟ್ ಸರ್ಕಲ್ ಸೇರಿ ಹಲವೆಡೆ ಬೈಕ್ ರ‍್ಯಾಲಿ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಂಜಯ್ ನಗರ ಸರ್ಕಲ್, ಆನಂದ್ ರಾವ್ ಸರ್ಕಲ್, ಆರ್.ಟಿ ನಗರದ ತರಳುಬಾಳು ಜಂಕ್ಷನ್ ಸೇರಿದಂತೆ ಐದಾರು ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಎರಡು ಕೆಎಸ್ ಆರ್ಪಿ, ಕಾವೇರಿ ನಿವಾಸದ ಬಳಿ ಒಂದು ಬಿಎಂಟಿಸಿ ಬಸ್, ಒಂದು ಕೆಎಸ್ ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕೆಲ ರೌಡಿಶೀಟರ್ಗಳು ಸೇರಿದಂತೆ 150ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 2016ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್ ವೇಳೆ ಕಲ್ಲುತೂರಿ, ಬೆಂಕಿ ಹಚ್ಚಿದ್ದ ಹಲವು ರೌಡಿಶೀಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂದ್ ನೆಪದಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ನಗರದ ಪ್ರಮುಖ ಜಂಕ್ಷನ್ಗಳು, ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.