ಅಧಿಕಾರಿಗಳೊಂದಿಗೆ ಚರ್ಚೆ – ರಾಜಕಾರಣಕ್ಕಿಂತ ರಕ್ಷಣೆ ಮುಖ್ಯವೆಂದ ಹೆಬ್ಬಾಳ್ಕರ್
ಕಾರ್ಕಳ : ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು ಸೆ. 23ರಂದು ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ಗೆ ಭೇಟಿ ನೀಡಿದರು. ಥೀಮ್ ಪಾರ್ಕ್ ವೀಕ್ಷಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪರಶುರಾಮ ಮೂರ್ತಿಯ ಬಗೆಗಿನ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ವಾಸ್ತವ ವಿಚಾರ ತಿಳಿಯುವೆ. ಏನು ಹೇಳಬೇಕೋ ಅದನ್ನ ಅಧಿಕಾರಿಗಳಿಗೆ ಹೇಳುವೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಭಾವನೆಗಳನ್ನು ಬೇರೆ ದಾರಿಗೆ ಎಳೆದು ರಾಜಕೀಯ ಮಾಡೋದಾಗಲಿ ಅಥವಾ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನಾಗಲಿ ಮಾಡಲ್ಲ. ರಾಜಕಾರಣಕ್ಕಿಂತ ಪ್ರೇಕ್ಷಣೀಯ ಸ್ಥಳದ ರಕ್ಷಣೆಯೇ ನನ್ನ ಭೇಟಿಯ ಮುಖ್ಯ ಉದ್ಧೇಶವೆಂದರು.
ವರದಿ ತರಿಸುವೆ
ಅಧಿಕಾರಿಗಳ ಮೇಲೆ ಒತ್ತಡವಿದ್ದ ಪರಿಣಾಮ ಪರಶುರಾಮ ಮೂರ್ತಿಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಮೂರ್ತಿಯ ಕೆಲವೊಂದು ಭಾಗಗಳನ್ನು ತಾತ್ಕಾಲಿಕ ನೆಲೆಯಲ್ಲಿ ನಿರ್ಮಿಸಲಾಗಿದೆ. ಪರಶುರಾಮ ಪ್ರತಿಮೆ ಬಗೆಗಿನ ವರದಿಯನ್ನು ತರಿಸಿಕೊಳ್ಳುವೆ. ಮೂರ್ತಿ ಮಾಡಿದವರಿಗೂ ನೋಟಿಸ್ ಜಾರಿ ಮಾಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಉಡುಪಿ ನಗರ ಸಭಾ ಸದಸ್ಯ ರಮೇಶ್ ಕಾಂಚನ್, ತಾ.ಪಂ. ಮಾಜಿ ಸದಸ್ಯ ಸುಧಾಕರ್ ಶೆಟ್ಟಿ ಮುಡಾರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಯೋಗೇಶ್ ಆಚಾರ್ಯ ಇನ್ನಾ, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.