1000 ಕೋ. ರೂ. ಹಗರಣದ ಸುಳಿಯಲ್ಲಿ ನಟ ಗೋವಿಂದ

ಸಾವಿರಾರು ಜನರಿಗೆ ಪಂಗನಾಮ ಹಾಕಿದ ಬೃಹತ್‌ ಹಗರಣ

ಮುಂಬಯಿ : ಸೋಲಾರ್ ಟೆಕ್ನೋ ಅಲಾಯನ್ಸ್ ಎಂಬ ಕಂಪನಿ ಎಸಗಿದ 1000 ಕೋಟಿ ರೂಪಾಯಿಯ ಹಗರಣದಲ್ಲಿ ಹಿಉಂದಿಯ ಜನಪ್ರಿಯ ನಟ, ಮಾಜಿ ಸಂಸದ ಗೋವಿಂದ ಸಿಲುಕಿಕೊಂಡಿದ್ದಾರೆ. ಈ ಕಂಪನಿ ಲಕ್ಷಾಂತರ ಜನರಿಂದ ಹೂಡಿಕೆ ಮಾಡಿಸಿಕೊಂಡು ಪಂಗನಾಮ ಹಾಕಿದೆ. ಹಗರಣದ ಮೊತ್ತ ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದ್ದು, ಕಂಪನಿಯ ಜಾಹೀರಾತಿನಲ್ಲಿ ಗೋವಿಂದ ಕಾಣಿಸಿಕೊಂಡಿದ್ದರು. ಹೀಗಾಗಿ ಅವರನ್ನು ವಿಚಾರಣೆ ಕರೆಯಬೇಕೆಂಬ ಒತ್ತಾಯ ಕೇಳಿಬಂದಿದೆ.
ಗೋವಿಂದ ನಟನೆಯಿಂದ ದೂರವಾಗಿ ಬಹಳ ಸಮಯವಾಯಿತು. ಒಂದು ಕಾಲದ ಸೂಪರ್‌ಸ್ಟಾರ್‌ ಈಗ ಅವಕಾಶವಿಲ್ಲದೆ ಮೂಲೆಗುಂಪಾಗಿದ್ದಾರೆ. ಕಾಂಗ್ರೆಸ್‌ ಸೇರಿ ಒಂದು ಅವಧಿಗೆ ಸಂಸದರಾಗಿದ್ದರೂ ರಾಜಕೀಯವೂ ಅವರ ಕೈಹಿಡಿದಿಲ್ಲ. ಹೀಗೆ ಎಲ್ಲ ಕಡೆಯಲ್ಲಿ ನಿರಾಶೆ ಅನುಭವಿಸಿರುವ ಗೋವಿಂದ ಈಗ ಅನಗತ್ಯವಾಗಿ ಹಗರಣದಲ್ಲಿ ಸಿಲುಕವಂತಾಗಿದೆ.
1000 ಕೋಟಿ ರೂಪಾಯಿ ಹಗರಣದಲ್ಲಿ ಗೋವಿಂದ ಅವರು ವಿಚಾರಣೆ ಎದುರಿಸಬೇಕಿದೆ. ಒಡಿಶಾ ಆರ್ಥಿಕ ಅಪರಾಧ ವಿಭಾಗ ಈ ಕುರಿತು ತನಿಖೆ ನಡೆಸುತ್ತಿದೆ. ಇದರಲ್ಲಿ ನಟ ಗೋವಿಂದ ಅವರ ಹೆಸರೂ ತಳುಕು ಹಾಕಿಕೊಂಡಿದೆ.
ಶೀಘ್ರವೇ ಒಡಿಶಾ ಪೊಲೀಸರು ಮುಂಬಯಿಗೆ ತೆರಳಿ ಗೋವಿಂದ ಅವರನ್ನು ವಿಚಾರಣೆಗೆಒಳಪಡಿಸಲಿದ್ದಾರೆ. ಸೋಲಾರ್ ಟೆಕ್ನೋ ಅಲಾಯನ್ಸ್​ನ ಗೋವಾ ಕಾರ್ಯಕ್ರಮದಲ್ಲಿ ಗೋವಿಂದ ಭಾಗಿಯಾಗಿದ್ದರು. ಅವರು ಕೆಲವು ವಿಡಿಯೋದಲ್ಲಿ ಕಂಪನಿಯನ್ನು ಪ್ರಮೋಟ್ ಮಾಡಿದ್ದಾರೆ ಎಂದು ಒಡಿಶಾ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.
ಆದರೆ ಗೋವಿಂದ ಅವರು ಪ್ರಕರಣದಲ್ಲಿ ಆರೋಪಿಯೂ ಅಲ್ಲ, ಶಂಕಿತನೂ ಅಲ್ಲ. ಇದು ಕೇವಲ ಒಂದು ಸಾಮಾನ್ಯ ವಿಚಾರಣೆ ಆಗಿದೆ ಅಷ್ಟೇ. ಗೋವಿಂದ ಅವರು ಕಂಪನಿಯ ಜಾಹೀರಾತುಗಳಲ್ಲಿ ಭಾಗಿ ಆಗಿರುವುದರಿಂದ ಅವರನ್ನು ಸಾಕ್ಷ್ಯ ಎಂದು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗೋವಿಂದ​ಗೂ ಈ ಹಗರಣಕ್ಕೂ ಯಾವುದೇ ಸಂಬಂಧ ಇಲ್ಲ. ಗೋವಿಂದ ಈ ಕಂಪನಿಯ ಕಾರ್ಯಕ್ರಮಕ್ಕೆ ತೆರಳಿದ್ದರು ಅಷ್ಟೇ. ಅವರಿಗೂ ಹಗರಣಕ್ಕೂ ಸಂಬಂಧ ಕಲ್ಪಿಸುವುದು ಸರಿ ಅಲ್ಲ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.error: Content is protected !!
Scroll to Top