ಕಾರ್ಕಳ : 2004 ರಿಂದ ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳಲ್ಲೂ ಸಕ್ರಿಯನಾಗಿ ಕೆಲಸ ನಿರ್ವಹಿಸಿ ನಿರಂತರ ಜನ ಸಂಪರ್ಕದೊಂದಿಗೆ ಬೆಳೆದವನು ನಾನು. ಈ ಬಾರಿ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷತೆಗಾಗಿ ನಡೆದ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಇಚ್ಚಿಸಿ ಎಲ್ಲರ ಆರ್ಶೀವಾದದಿಂದ ಪಂಚಾಯತ್ ಅಧ್ಯಕ್ಷನಾಗಿ ಆಯ್ಕೆಯಾಗಿರುತ್ತೇನೆ. ನಾನು ಬಂಡಾಯ ಅಭ್ಯರ್ಥಿ ಅಲ್ಲ. ಅಲ್ಲದೆ ಪಕ್ಷದ ವಿರುದ್ಧವಾಗಿ ನನ್ನ ಯಾವುದೇ ಚಟುವಟಿಕೆಗಳಿಲ್ಲ ಎಂದು ನಲ್ಲೂರು ಗ್ರಾ.ಪಂ. ನೂತನ ಅಧ್ಯಕ್ಷ ಅಶೋಕ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ನಾನು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರ ಮತಗಳಿಂದ ಆಯ್ಕೆಯಾಗಿದ್ದೇ ಹೊರತು ಇತರ ಪಕ್ಷಗಳ ಸಹಕಾರದಿಂದಲ್ಲ. ಪಕ್ಷದ ಹಿರಿಯರೆಲ್ಲರ ಸಹಕಾರದಿಂದ ನಾನು ಇಲ್ಲಿಯವರೆಗೆ ಪಕ್ಷದಲ್ಲಿ ಗುರುತಿಸಿಕೊಂಡು, ಕೆಲಸ ಕಾರ್ಯಗಳನ್ನು ಮಾಡಿದವನು. ನಮ್ಮೆಲ್ಲರ ಹೆಮ್ಮೆಯ ಶಾಸಕ ವಿ. ಸುನಿಲ್ ಕುಮಾರ್ ಅವರ ಕಾರ್ಯವೈಖರಿ, ಅಭಿವೃದ್ಧಿ ಚಟುವಟಿಕೆಳನ್ನು ನೋಡಿ ಪಕ್ಷದಲ್ಲಿ ಬೆಳೆದವನು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಮಗ್ರ ಅಭಿವೃದ್ಧಿ ನನ್ನ ಗುರಿ
ಮುಂದಿನ ದಿನಗಳಲ್ಲೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನಗೆ ನೀಡಿದ ಈ ಮಹತ್ತರವಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಲ್ಲೂರು ಗ್ರಾಮ ಪಂಚಾಯತ್ನ ಎಲ್ಲ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಸಕರ ಸಹಕಾರದೊಂದಿಗೆ ನಲ್ಲೂರು ಗ್ರಾಮವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ನನ್ನ ಮುಂದಿನ ಗುರಿ. ನನಗೆ ಈ ಜವಾಬ್ದಾರಿಯುತ ಸ್ಥಾನ ನೀಡಿದ ಬಿಜೆಪಿ ಬೆಂಬಲಿತ ನಲ್ಲೂರು ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಕಾರ್ಕಳ ಬಿಜೆಪಿ ಪಕ್ಷದ ಎಲ್ಲ ಹಿರಿಯರಿಗೆ, ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಮನದಾಳದಿಂದ ಧನ್ಯವಾದ ಅರ್ಪಿಸುತ್ತೇನೆ ಎಂದವರು ತಿಳಿಸಿದ್ದಾರೆ.







































