ಲೈಂಗಿಕ ದೌರ್ಜನ್ಯ, ಗುಂಪು ಹಿಂಸಾಚಾರ, ದೇಶದ್ರೋಹಕ್ಕೆ ಕಠಿಣ ಶಿಕ್ಷೆ ಪ್ರಸ್ತಾವ
ಹೊಸದಿಲ್ಲಿ : ಲೈಂಗಿಕ ದೌರ್ಜನ್ಯ, ಗುಂಪು ಹಿಂಸಾಚಾರ, ಲವ್ ಜಿಹಾದ್ ಮತ್ತು ದೇಶದ್ರೋಹದಂಥ ಕೃತ್ಯಗಳನ್ನು ಘೋರ ಅಪರಾಧ ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲು ಅವಕಾಶವಿರುವ ಮಸೂದೆಯನ್ನು ಕೇಂದ್ರ ನಿನ್ನೆ ಸಂಸತ್ತಿನಲ್ಲಿ ಮಂಡಿಸಿದೆ. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಮಸೂದೆ ಎಂಬ ಮೂರು ಮಸೂದೆಗಳನ್ನು ಗೃಹ ಸಚಿವ ಅಮಿತ್ ಷಾ ಮಂಡಿಸಿದ್ದು, ಇವುಗಳು ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಮಹತ್ತರ ಬದಲಾವಣೆಗಳನ್ನು ಮಾಡಲಿವೆ. ಈ ಮಸೂದೆ ಮಂಜೂರಾಗಿ ಜಾರಿಗೆ ಬಂದ ಬಳಿಕ ಭಾರತಿಯ ದಂಡ ಸಂಹಿತೆಯ ಹೆಸರು ಭಾರತಿಯ ನ್ಯಾಯ ಸಂಹಿತೆ ಎಂದು ಬದಲಾಗಲಿದೆ.
160 ವರ್ಷಗಳಿಂದ ಐಪಿಸಿ ಸೆಕ್ಷನ್‌ಗಳು ಜಾರಿಯಲ್ಲಿವೆ. ಈ ಕಾಯಿದೆಗಳನ್ನು ಬ್ರಿಟಿಷರು 1860ರಲ್ಲಿ ರೂಪಿಸಿದ್ದರು. ಇವು ಕಾನೂನು ಹಾಗೂ ಸಂಹಿತೆಗಳಿಗೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2023 ಜಾರಿಗೆ ಬರಲಿದೆ ಎಂದು ಇದು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳ ವಿರುದ್ಧದ ಕಾನೂನುಗಳನ್ನು ಒಳಗೊಂಡಿದೆ ಅಮಿತ್ ಷಾ ಹೇಳಿದ್ದಾರೆ.
ಕಾನೂನು ಆಯೋಗ ದೇಶದ್ರೋಹ ಕಾನೂನನ್ನು ಬಲವಾಗಿ ಬೆಂಬಲಿಸಿದೆ. ಈ ಕಾನೂನಿನಲ್ಲಿ ಬದಲಾವಣೆ ತರಬೇಕು. ಕೆಲ ಮಹತ್ವದ ಬದಲಾವಣೆಗೊಂದಿಗೆ ಈ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿತ್ತು. ದೇಶದ್ರೋಹಕ್ಕೆ ಸಂಬಂಧಿಸಿದ ಶಿಕ್ಷೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಅಥವಾ ಏಳು ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸುವಂತೆ ಆಯೋಗವು ಶಿಫಾರಸು ಮಾಡಿತ್ತು. ಇದನ್ನು ಇಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಅಡಕಗೊಳಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಅಸಮಾಧಾನವನ್ನು ಹೊರಹಾಕಬಹುದು. ಆದರೆ, ಇದು ದ್ವೇಷದ ಭಾವನೆಗಳನ್ನು ಕೆರಳಿಸುವಂತಿರಬಾರದು. ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬಹುದು. ವ್ಯವಸ್ಥೆಯನ್ನು ಟೀಕಿಸುವ ಭರದಲ್ಲಿ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಹುಟ್ಟುಹಾಕುವಂತಿಲ್ಲ ಎಂದು ನ್ಯಾಯ ಸಂಹಿತೆಯ ಸೆಕ್ಷನ್ 150ರಲ್ಲಿ ವಿವರಿಸಲಾಗಿದೆ.



































