149 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು, ಹಲವರ ಸ್ಥಿತಿ ಚಿಂತಾಜನಕ
ಚಿತ್ರದುರ್ಗ: ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ ಶುಕ್ರವಾರದಿಂದೀಚೆಗೆ ಕಲುಷಿತ ನೀರು ಸೇವಿಸಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದ್ದು, 149 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ವಾಂತಿ ಭೇದಿಯಿಂದ ಬಳಲುತ್ತಿದ್ದ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ ಕವಾಡಿಗರಹಟ್ಟಿಯ ರುದ್ರಪ್ಪ (50) ಎಂಬುವುರು ಇಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ.
ಕಲುಷಿತ ನೀರು ಸೇವನೆ ಪ್ರಕರಣ ಮೊದಲು ಜುಲೈ 31ರಂದು ವರದಿಯಾಗಿತ್ತು. ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ನಿವಾಸಿಗಳಾದ ಮಂಜುಳಾ (23) ಮತ್ತು ರಘು (27) ಎಂಬುವವರು ಸಾವಿಗೀಡಾಗಿದ್ದಾರೆ. ಕಲುಷಿತ ನೀರು ಸೇವಿಸಿ 36 ಮಂದಿ ಅಸ್ವಸ್ಥರಾಗಿದ್ದು, ಜುಲೈ 30ರಂದು ಗ್ರಾಮಕ್ಕೆ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದ ಪ್ರವೀಣ್, ಮರುದಿನ ವಡ್ಡರಸಿದ್ದನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.
115 ಮಂದಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, 34 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೀರಿನ ಮಾದರಿಯಲ್ಲಿ ಯಾವುದೇ ವಿಷಕಾರಿ ರಾಸಾಯನಿಕ ಪತ್ತೆಯಾಗಿಲ್ಲ ಎಂದು ಎಫ್‌ಎಸ್‌ಎಲ್ ವರದಿ ದೃಢಪಡಿಸಿದೆ. ಸ್ಥಳೀಯರೊಬ್ಬರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದ ಬಳಿಕ ಕಿಡಿಗೇಡಿಗಳು ನೀರಿಗೆ ವಿಷ ಬೆರೆಸಿರಬಹುದು ಎಂದು ಆರೋಪಿಸಲಾಗಿತ್ತು. ಆದರೆ, ನೀರು ಕಲುಷಿತಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಎಇಇ ಆರ್. ಮಂಜುನಾಥ ಗಿರಡ್ಡಿ ಮತ್ತು ಜೆಇ ಎಸ್.ಆರ್. ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಲು ಅಧಿಕಾರಿಗಳು ಶಿಫಾರಸು ಮಾಡಿ ವರದಿ ಕಳುಹಿಸಿದ್ದಾರೆ. ಕವಾಡಿಗರಹಟ್ಟಿಯಲ್ಲಿ ವಾಲ್ವ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸಿ.ಎಚ್. ಪ್ರಕಾಶ್ ಬಾಬು ಎಂಬವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.














































































