‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ
ಬೆಂಗಳೂರು : ಮತ್ತೊಮ್ಮೆ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಈಗ ಸಿನೆಮಾ ರೂಪದಲ್ಲಿ ಬರಲಿದೆ. ಧರ್ಮಸ್ಥಳದಲ್ಲಿ ಸಂಭವಿಸಿದ ಈ ನೈಜ ಘಟನೆ ಆಧರಿಸಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ನಿರ್ಮಿಸಲು ಸದ್ದಿಲ್ಲದೆ ಸಿದ್ಧತೆ ನಡೆದಿದೆ.
ಹನ್ನೊಂದು ವರ್ಷದ ಹಿಂದೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಸೌಜನ್ಯ ಸಾವಿನ ಪ್ರಕರಣದ ಕಾವು ಇನ್ನೂ ತಗ್ಗಿಲ್ಲ. ಇತ್ತೀಚೆಗೆ ಈ ಪ್ರಕರಣದ ಆರೋಪಿ ಎಂದು ಹೇಳಿ ಪೊಲೀಸರು ಬಂಧಿಸಿದ್ದ ಕಾರ್ಕಳದ ಬೈಲೂರಿನ ಸಂತೋಷ್ ರಾವ್ ಎಂಬವರನ್ನು ನ್ಯಾಯಾಲಯ ನಿರ್ದೋಷಿ ಎಂದು ಬಿಡುಗಡೆಗೊಳಿಸಿದ ಬಳಿಕ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.
ಇದೇ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಸೌಜನ್ಯ ಸಾವಿನ ಘಟನೆ ನಡೆದಿದ್ದು 2012ರಲ್ಲಿ. ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯರನ್ನು ಅಕ್ಟೋಬರ್ 9ರಂದು ಅಪಹರಿಸಲಾಯಿತು. ಅದೇ ದಿನ ರಾತ್ರಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಯಿತು. 2012ರ ಅಕ್ಟೋಬರ್ 10ರಂದು ಧರ್ಮಸ್ಥಳದ ಮಣ್ಣಸಂಕದಲ್ಲಿ ಅವರ ಶವ ಪತ್ತೆ ಆಯಿತು. ಸೌಜನ್ಯ ಮೇಲೆ ಅತ್ಯಾಚಾರ ಕೂಡ ನಡೆದಿತ್ತು. ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂತೋಷ್ ರಾವ್ ಅವರು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಈ ಪ್ರಕರಣದಲ್ಲಿ ಯಾರಿಗೂ ಶಿಕ್ಷೆ ಆಗಿಲ್ಲ. ಪ್ರಕರಣದ ಆರೋಪಿಗಳು ಯಾರು ಎಂಬುದೇ ಇನ್ನೋ ತಿಳಿದುಬಂದಿಲ್ಲ. ಸಿಐಡಿ, ಸಿಬಿಐ ಎಂದು ಸಾಕಷ್ಟು ತನಿಖೆ ನಡೆದರೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ. ಸೌಜನ್ಯ ಹಂತಕರು ಯಾರು ಎಂಬ ಪ್ರಶ್ನೆಯೊಂದಿಗೆ ಇದೀಗ ನ್ಯಾಯಕ್ಕಾಗಿ ಮತ್ತೆ ಹೋರಾಟ ಶುರುವಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿ.ಕೆ. ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರಲಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ.































