ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ಉಗ್ರರ ಟಾರ್ಗೆಟ್‌

ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ಬಂಧಿಸಿರುವ ಐವರು ಉಗ್ರರು ಭೀಕರ ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಅವರ ಗುರಿಯಾಗಿತ್ತು. ಅವರನ್ನು ಬಂಧಿಸುವುದರೊಂದಿಗೆ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ ಐವರು ಉಗ್ರರ ಬಂಧನ ಎಂಬ ಆಘಾತಕಾರಿ ಸುದ್ದಿ ಬಂದು ಅಪ್ಪಳಿಸಿತ್ತು. ನಿಖರ ಮಾಹಿತಿ ಪಡೆದು ನಗರ ಅಪರಾಧ ವಿಭಾಗ ಪೊಲೀಸರು ಈ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಕೂಟದ ಒಬ್ಬ ಜೈಲಿನಲ್ಲಿದ್ದರೆ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಏಳು ಪಿಸ್ತೂಲ್, 45 ಮದ್ದುಗುಂಡುಗಳು, 12 ಬೇಸಿಕ್ ಸೆಟ್ ಮೊಬೈಲ್ ಫೋನ್, ಡ್ರ್ಯ್ಯಾಗರ್, ವಾಕಿಟಾಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರು ಬೆಂಗಳೂರು ನಗರದಲ್ಲಿ ಕೃತ್ಯವೆಸಗಲು ಪ್ಲ್ಯಾನ್​​ ಮಾಡಿದ್ದರು. ವಿದೇಶದಿಂದ ವಿಧ್ವಂಸಕ ಕೃತ್ಯಕ್ಕೆ ಹಣ ಸಂಗ್ರಹಿಸುತ್ತಿದ್ದರು ಎಂದು ಕಮಿಷನರ್‌ ದಯಾನಂದ್‌ ತಿಳಿಸಿದ್ದಾರೆ.
ಬಂಧಿತರನ್ನು ಸೈಯದ್ ಸುಹೇಲ್, ಉಮರ್, ಜಾನಿದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಈ ತಂಡ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಈ ಐವರೂ 2017ರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಉಗ್ರರ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
2008ರಲ್ಲಿ ಸಂಭವಿಸಿದ್ದ ಸೀರಿಯಲ್ ಸ್ಫೋಟ ಆರೋಪಿ ನಸೀರ್​ ಸಂಚು ರೂಪಿಸಿದ್ದ. ಟಿ.ನಸೀರ್​​​ ಹಾಗೂ ಜುನೈದ್ ಈ ಪ್ರಕರಣದ ಮಾಸ್ಟರ್ ಮೈಂಡ್​ಗಳಾಗಿದ್ದು, ಸದ್ಯ ಟಿ.ನಸೀರ್​ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು, ಪ್ರಮುಖ ಲೀಡರ್ ಜುನೈದ್‌ ತಲೆಮರೆಸಿಕೊಂಡಿದ್ದಾನೆ.
2008 ರ ಸೀರಿಯಲ್ ಬ್ಲಾಸ್ಟ್ ಕೇಸ್‌ನ ಆರೋಪಿ ಟಿ.ನಜೀರ್ ಲಷ್ಕರ್‌ ಸಂಘಟನೆಗೆ ಸೇರಿದ್ದವನು. ಈ ಶಂಕಿತರ ಉಗ್ರರು ಕೃತ್ಯವೆಸಗಲು ವಿದೇಶದಿಂದ ಹಣ ಬಂದಿದೆ. ಆರೋಪಿಗಳಿಗೆ ಆನ್​ಲೈನ್ ಹಾಗೂ ನಗದು ರೂಪದಲ್ಲಿ ಹಣ ಪೂರೈಕೆಯಾಗಿದೆ. ಐವರು ಉಗ್ರರನ್ನು 15 ದಿನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಮಾತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯಕ್ಕೆ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಉಗ್ರರು ಬೆಂಗಳೂರು ನಗರವನ್ನೇ ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯವೆಸಗಲು ಹೊಂಚುಹಾಕುತ್ತಿದ್ದರು. ಪೊಲೀಸರ ಮಾಹಿತಿ ಪ್ರಕಾರ ಅರೆಸ್ಟ್ ಆದ ಎಲ್ಲಾ ಶಂಕಿತರು ಬೆಂಗಳೂರು ಸುತ್ತಮುತ್ತಲಿನ ನಿವಾಸಿಗಳೇ ಆಗಿದ್ದಾರೆ. ಉಗ್ರರ ಜೊತೆ ಸಂಪರ್ಕ ಹೊಂದಿ ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು ಎಂಬುದರ ಬಗ್ಗೆಯೂ ತರಬೇತಿ ಪಡೆದಿದ್ದರು. ಶಂಕಿತರ ಟೀಂ ಎಲ್ಲಾ ಕಡೆಯೂ ಆಕ್ಟೀವ್ ಆಗಿತ್ತು. ಬೆಂಗಳೂರಿನ ಸುಮಾರು ಹತ್ತು ಕಡೆ ಬ್ಲಾಸ್ಟ್‌ಗೆ ಪ್ಲಾನ್ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.













































































error: Content is protected !!
Scroll to Top