ಬೆಂಗಳೂರು : ಚೀನಾದ ಲೋನ್ ಆ್ಯಪ್ಗಳ ಬಗ್ಗೆ ಬಹಳಷ್ಟು ಸುದ್ದಿಗಳನ್ನು ಓದಿರಬಹುದು. ಇದು ಬಹಳ ವ್ಯವಸ್ಥಿತ ಜಾಲವಾಗಿ ಕಾರ್ಯನಿರ್ವಹಿಸುತ್ತಿರುವ ಸಂಗತಿಯನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ. ಬೆಂಗಳೂರಿನ ಇಡಿ ವಲಯದಲ್ಲಿ ದಾಖಲಾದ 25 ಎಫ್ಐಆರ್ಗಳ ತನಿಖೆ ಶುರುವಿಟ್ಟುಕೊಂಡ ಜಾರಿ ನಿರ್ದೇಶನಾಲಯ ಒಂದು ವರ್ಷದಲ್ಲಿ ಬಹಳಷ್ಟು ಶಾಕಿಂಗ್ ಸಂಗತಿಗಳನ್ನು ಬಯಲಿಗೆ ಎಳೆದಿದೆ.
ಬ್ಲ್ಯಾಕ್ಮೇಲ್, ಮನಿ ಲಾಂಡರಿಂಗ್, ವಿದೇಶೀ ಬ್ಯಾಂಕುಗಳ ನೆರವು, ಎನ್ಬಿಎಫ್ಸಿಗಳ ನಂಟು, ಕ್ರಿಪ್ಟೋ ಇತ್ಯಾದಿ ವಿಚಾರಗಳು ಇಡಿ ತನಿಖೆಯಿಂದ ಬೆಳಕಿಗೆ ಬಂದಿವೆ. ಕೆಲ ಖಾಸಗಿ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕುಗಳ ಸಹಾಯದಿಂದ ಚೀನಾಗೆ 3,000 ಕೋಟಿ ರೂ.ನಷ್ಟು ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ ಎಂದು ವರದಿಯಾಗಿದೆ.
ಚೀನೀ ಲೋನ್ ಮತ್ತು ಇನ್ವೆಸ್ಟ್ಮೆಂಟ್ ಆ್ಯಪ್ಗಳು
ಚೀನೀ ರಾಷ್ಟ್ರೀಯರು ಭಾರತದ ಹಣಕಾಸು ವ್ಯವಸ್ಥೆಯ ಮೇಲೆ ಪ್ರಹಾರ ಮಾಡಲು ಲೋನ್ ಆ್ಯಪ್ಗಳ ಮಾರ್ಗ ಹುಡುಕಿರುವುದ ತನಿಖೆಯಿಂದ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ದಾಖಲಾದ 25 ಪ್ರಕರಣಗಳಲ್ಲಿ ಬಹುತೇಕವು ಚೀನಾ ಆ್ಯಪ್ಗಳಿಂದ ಎದುರಾದ ಧಮಕಿ, ಸುಲಿಗೆ, ಬ್ಲ್ಯಾಕ್ಮೇಲ್, ರಕ್ಕಸ ಬಡ್ಡಿ ಇತ್ಯಾದಿ ಬಗ್ಗೆ ಇದ್ದ ದೂರುಗಳೇ ಆಗಿದ್ದವು. ಈ ಆ್ಯಪ್ಗಳು ಸುಲಭವಾಗಿ ಸಾಲ ಕೊಟ್ಟು ವಿಪರೀತ ಬಡ್ಡಿ ವಿಧಿಸುತ್ತಿದ್ದವು. ಏಳು ದಿನದಲ್ಲಿ ಶೇ. 40ರಷ್ಟು ಬಡ್ಡಿ ದರ ಕಟ್ಟು ಎಂದರೆ ಯಾರಿಂದ ಸಾಧ್ಯವಾದೀತು? ಸಾಲ ಪಡೆದವರ ಮೇಲೆ ಬೆದರಿಕೆ ಹಾಕುವುದು, ಮೊಬೈಲ್ಗಳಲ್ಲಿರುವ ಡಾಟಾ ಕದ್ದು ಅದರ ಮೂಲಕ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡುವುದು ಇತ್ಯಾದಿಯನ್ನು ಮಾಡಲಾಗುತ್ತಿತ್ತು.
ಕಮಿಷನ್ ಆಸೆಗೆ ಬಿದ್ದವಾ ಎನ್ಬಿಎಫ್ಸಿಗಳು?
ಚೀನೀ ರಾಷ್ಟ್ರೀಯರು ಭಾರತದ ಹಣಕಾಸು ವ್ಯವಸ್ಥೆಗೆ ಘಾಸಿ ತರಲು ಒಂದು ಜಾಲವನ್ನೇ ರೂಪಿಸಿದ್ದರು. ಎನ್ಬಿಎಫ್ಸಿಗಳ ಹೆಸರು ಮುಂದಿಟ್ಟುಕೊಂಡು ಚೀನೀ ಲೋನ್ ಕಂಪನಿಗಳು ಜನರನ್ನು ಸೆಳೆಯುತ್ತಿದ್ದವು. ಹಣ ಪಾವತಿಗೆ ಅವಕಾಶ ಕೊಡುವ ಪೇಮೆಂಟ್ ಗೇಟ್ವೇಗಳನ್ನು ಏಮಾರಿಸಿ ಮರ್ಚೆಂಟ್ ಐಡಿ ಪಡೆಯುತ್ತಿದ್ದವು. ಕೆಲ ಎನ್ಬಿಎಫ್ಸಿಗಳು ಇಂಥ ಚೀನೀ ಕಂಪನಿಗಳಿಗೆ ಪೇಮೆಂಟ್ ಗೇಟ್ವೇಗಳಿಂದ ಮರ್ಚೆಂಟ್ ಐಡಿ ಸಿಗುವಂತೆ ನೆರವಾಗುತ್ತಿದ್ದವಂತೆ.

ಚೀನೀ ಜನರ ಡಮ್ಮಿ ಕಂಪನಿಗಳಿಗೆ ಡಮ್ಮಿ ಡೈರೆಕ್ಟರುಗಳನ್ನು ಹೆಸರಿಸಲಾಗುತ್ತಿತ್ತು. ಆದರೆ, ಈ ನಿರ್ದೇಕರ ಬದಲು ಚೀನೀಯರೇ ನೇರವಾಗಿ ಎನ್ಬಿಎಫ್ಸಿಗಳ ಜೊತೆ ವ್ಯವಹಾರ ಕುದುರಿಸಿ ಒಪ್ಪಂದಗಳಿಗೆ ಸಹಿಹಾಕುತ್ತಿದ್ದರು. ಸಾಲದ ವ್ಯವಹಾರ ಕೊಡಲು ಈ ಚೀನೀ ಕಂಪನಿಗಳಿಗೆ ಎನ್ಬಿಎಫ್ಸಿಗಳು ಪರವಾನಿಗೆ ಕೊಟ್ಟಿದ್ದವು. ಕಮಿಷನ್ ಆಸೆಗೆ ಹಣಕಾಸು ಸಂಸ್ಥೆಗಳಿಂದ ಈ ಕೆಲಸ ಆಗಿತ್ತು.
ಚೀನೀ ಕಂಪನಿಗಳ ವೆಬ್ಸೈಟ್ನಲ್ಲಿ ಲಾಗಿನ್ ಆಗದೇ ಪೇಮೆಂಟ್ ಮಾಡುವ ಬಟನ್ ಅನ್ನು ಸೇರಿಸಲಾಗಿತ್ತು. ಇದರಿಂದ ಪೇಮೆಂಟ್ ಗೇಟ್ವೇ ಕಂಪನಿಗಳಿಗೆ ಈ ಕಂಪನಿಗಳ ನಿಜ ವ್ಯವಹಾರ ಗೊತ್ತಾಗುತ್ತಿರಲಿಲ್ಲ. ಈ ರೀತಿಯಲ್ಲಿ ಹಣವನ್ನು ಚೀನೀಯರು ಲಪಟಾಯಿಸುತ್ತಿದ್ದರು. ಕೆಲವೊಮ್ಮೆ ಕ್ರಿಪ್ಟೋ ಮೂಲಕ ಹಣದ ವರ್ಗಾವಣೆ ಆಗುತ್ತಿತ್ತು ಎಂದೂ ಹೇಳಲಾಗುತ್ತಿದೆ.



























