ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಆಡಿಯೋ ಹಾಕಿಸುತ್ತೇನೆ : ಜಾರ್ಜ್ – ಹೆಚ್‌ಡಿಕೆ ವ್ಯಾಗ್ಯುದ್ಧ
ಬೆಂಗಳೂರು : ವಿಧಾನ ಸಭಾ ಅಧಿವೇಶನ ಗುರುವಾರ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಡುವೆ ಕೇರ್, ಡೋಂಟ್ ಕೇರ್ ವಾಕ್ಸಮರಕ್ಕೆ ಸಾಕ್ಷಿಯಾಯಿತು.
ನಾಗಮಂಗಲ ಚಾಲಕ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ದಾಳಿ ನಡೆಯಿತು. ಸಚಿವ ಚಲುವರಾಯಸ್ವಾಮಿ ಅವರ ವಜಾಕ್ಕೆ ಕುಮಾರಸ್ವಾಮಿ ಅವರು ಪಟ್ಟು ಹಿಡಿದಾಗ ಉತ್ತರ ಕೊಟ್ಟ ಚಲುವರಾಯಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇಕ್ ಹ್ಯಾಂಡ್ ಮಾಡಿದ್ದರು. ಇದ್ದಕ್ಕೆ ಹೆಚ್‌ಡಿ ಕುಮಾರಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದರು. ಬಹಳ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಎಂದು ಶೇಕ್ ಹ್ಯಾಂಡ್ ಬೇರೆ ಎಂದು ವ್ಯಂಗ್ಯವಾಡಿದ ಎಚ್‌ಡಿಕೆ, ಇದಕ್ಕೆಲ್ಲಾ ನಾನು ಕೇರ್ ಮಾಡಲ್ಲ. ಈ ರೀತಿಯ ರಾಜಕಾರಣ ಶಾಶ್ವತ ಅಲ್ಲ ಎಂದು ಸಿಎಂ ಅವರನ್ನು ಕೆಣಕಿದರು.
ಈ ವೇಳೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ರೀ ಕುಮಾರಸ್ವಾಮಿ ಅವರೇ ನಿಮಗೆ ಹೆದರಿಕೊಳ್ಳುತ್ತೇವಾ ? ನೀವು ಕೇರ್ ಮಾಡಲ್ಲ ಅಂದರೆ ನಾವು ಮಾಡಲ್ಲ. ನೀವು ಕೇರ್ ಮಾಡಿದರೆ ನಾವು ಕೇರ್ ಮಾಡ್ತೀವಿ. ಯಾರೂ ಹೆದರಿಕೊಳ್ಳುವವರಿಲ್ಲ ಎಂದು ಕಿಡಿಕಾರಿದರು. ನಾನು ಸುಮ್ಮನೆ ಕುಳಿತುಕೊಂಡಿದ್ದೆ. ಅವರು ಬಂದು ಕೈಕೊಟ್ಟರು. ಅದಕ್ಕೆ ಚೆನ್ನಾಗಿ ಉತ್ತರ ಕೊಟ್ಟೆ ಎಂದು ಕೈಕುಲುಕಿದೆ ಎಂದರೆ ಹೇಗೆ ? ನನಗೂ ಇದಕ್ಕೆ ಸಂಬಂಧವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆನ್ಡ್ರೈವ್ ಪ್ರದರ್ಶನ
ಭ್ರಷ್ಟಾಚಾರದ ಪುರಾವೆಯಿರುವ ಪೆನ್ ಡ್ರೈವ್ ತಮ್ಮ ಜೇಬಿನಲ್ಲಿದೆ. ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಪ್ರದರ್ಶನ ಮಾಡುತ್ತೇನೆ. ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಗುರುವಾರ ಸದನದಲ್ಲಿ ಹೇಳಿದರು. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಜೊತೆಗೆ ಮಾತಿನ ಜಟಾಪಟಿ ನಡೆಯಿತು. ನನ್ನ ಬಳಿ ಪೆನ್ಡ್ರೈವ್ ಇದೆ. ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತಿದ್ದೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ ಎಂದು ಕುಮಾರಸ್ವಾಮಿ ಅವರಿಗೆ ಕೆ.ಜೆ.ಜಾರ್ಜ್ ತಿಳಿಸಿದರು. ಈ ವೇಳೆ ಇಬ್ಬರ ನಡುವೆ ಕೆಲಕಾಲ ವ್ಯಾಗ್ಯುದ್ಧ ನಡೆಯಿತು.





































