ಅಪರೂಪದ ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ

ಜುಲೈ ತಿಂಗಳ ನಾಲ್ಕನೇ ತಾರೀಕು ಕಾರ್ಕಳದ ಜನತೆಗೆ ಮರೆಯಲಾರದ ದಿನ. ರಾಜಕೀಯ ಕ್ಷೇತ್ರದಲ್ಲಿ‌ ಅನುಪಮ ಸೇವೆ ನೀಡಿದ ,ಅಪರೂಪದ ಸಜ್ಜನ ರಾಜಕಾರಣಿ, ಬಡವರ ಬಂಧು, ಜನ ಸೇವಕ, ಶಾಸಕರಾಗಿದ್ದ ಗೋಪಾಲ ಭಂಡಾರಿಯವರು ಇಹಲೋಕ ಅಗಲಿದ ದಿನ. ನನ್ನ ಶಿಕ್ಷಕ ವೃತ್ತಿಯ ಸಂದರ್ಭ ಅವರನ್ನು ಕೆಲವೊಂದು ಬಾರಿ ಭೇಟಿಯಾಗುವ ಅವಕಾಶ ದೊರೆಯುತ್ತಿತ್ತು. ದ.ಕ. ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನದ ವಿವಿಧ ಹಂತಗಳಲ್ಲಿ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಅವರೊಡನೆ ಭೇಟಿಯಾಗುವ ಸುಸಂದರ್ಭ ಹೊರತು ಬೇರೆ ಸಂಪರ್ಕ ಇರಲಿಲ್ಲ. ಸೇವಾ ನಿವೃತ್ತಿಯ ಬಳಿಕ ಕಾರ್ಯಕ್ರಮ ನಿಮಿತ್ತ ತಮ್ಮ ಕಚೇರಿಗೆ ನನ್ನನ್ನು ಆಮಂತ್ರಿಸಿದ್ದರು. ಅವರ ಸೇವಾ ಬದ್ಧತೆ, ಅನುಭವದ ಮಾತುಗಳಿಂದ ಪ್ರೇರಿತನಾಗಿ ಅವರ ಆತ್ಮೀಯರಲ್ಲಿ ಒಬ್ಬರಾಗುವ ಅವಕಾಶ ನನ್ನದಾಯಿತು. ಗೋಪಾಲ ಭಂಡಾರಿಯವರ ಮಾನವೀಯತೆಯ ಅಂತಃಕರಣದ ಮಿಡಿತಕ್ಕೆ ನಾನು ಸಾಕ್ಷಿಯಾಗಿರುವೆನು. ಕಾರ್ಕಳಕ್ಕೆ ಯಾವುದಾದರೂ ಕೆಲಸಕ್ಕೆ ಬಂದವರು ಅವರ ಭೇಟಿಗಾಗಿ ಬರುವ ದೂರದ ಗ್ರಾಮೀಣ ಪ್ರದೇಶದ ಬಡ ಅಭಿಮಾನಿಗಳಿಗೆ ಬಸ್ಸಿನ ಖರ್ಚಿಗೆಂದು ಒಂದಿಷ್ಟು ಹಣವನ್ನೂ ನೀಡಿ ಕಳುಹಿಸುತ್ತಿದ್ದರು.

ಇತರರ ಕಷ್ಟ ಅರಿತು ಕೇಳದೆಯೇ ಸಹಾಯ ಮಾಡುವ ಮನೋಭಾವ ಅವರದು. ಓರ್ವ ಪತ್ರಿಕಾ ವರದಿಗಾರರು ತಮ್ಮ ವಿವಾಹ ಆಮಂತ್ರಣ ಪತ್ರಿಕೆ ಭಂಡಾರಿಯವರಿಗೆ ನೀಡಲು ಹೋಗಿದ್ದರು. ವರದಿಗಾರರು ಕಾರ್ಕಳಕ್ಕೆ ಬಂದು ಒಂದೆರಡು ತಿಂಗಳುಗಳಾಗಿದ್ದಷ್ಟೆ. ಹೆಚ್ಚು ಪರಿಚಯ ಇಲ್ಲದಿದ್ದರೂ ವಧುವಿನ ಊರು, ವೃತ್ತಿ, ಕೆಲಸ ಮಾಡುವ ಸ್ಥಳ ಇವುಗಳ ಬಗ್ಗೆ ಸಹಜವಾಗಿ ವಿಚಾರಿಸಿದರು. ವಿವಾಹದ ಅನಂತರ ಕಾರ್ಕಳದ ಸಮೀಪದ ಸ್ಥಳಕ್ಕೆ ವರ್ಗಾಯಿಸುವ ಪ್ರಯತ್ನವಿದೆ ಎಂದು ವರದಿಗಾರರು ತಿಳಿಸಿದರು. ಮದುವೆಯ ಒಂದು ವಾರದಲ್ಲಿ ಭಂಡಾರಿಯವರ ಫೋನ್ ಕರೆಗೆ ಅವರ ಕಚೇರಿಗೆ ಹೋದಾಗ ವರದಿಗಾರರ ಕೈಗೆ ಒಂದು ಕವರನ್ನು ಕೊಟ್ಟರು. ತೆರೆದು ನೋಡಿದಾಗ ನವ ವಧುವಿಗೆ ಕಾರ್ಕಳದ ಸಮೀಪದ ಊರಿಗೆ ವರ್ಗಾವಣೆ ಪತ್ರ ಅದಾಗಿತ್ತು.

ಗೋಪಾಲ ಭಂಡಾರಿಯವರು ಪುಸ್ತಕ ಪ್ರೇಮಿ, ಜ್ಞಾನಧಾಹಿ. ಬೆಂಗಳೂರಿನಿಂದ ಬರುವಾಗ ಪುಸ್ತಕಗಳನ್ನು ಖರೀದಿಸಿ ತರುತ್ತಿದ್ದರು. ಸ್ವಲ್ಪ ಸಮಯ ಸಿಕ್ಕಿದರೂ ಪುಸ್ತಕ ಓದುವ ಹವ್ಯಾಸ ಅವರದ್ದು. ಯಾವುದೇ ಸಮಾರಂಭದಲ್ಲಿ ಪುಸ್ತಕಗಳನ್ನು ಓದಿ ಸಂದರ್ಭಕ್ಕೆ ಯೋಗ್ಯವಾದ ಅತ್ತ್ಯುತ್ತಮ ಭಾಷಣ ಮಾಡುತ್ತಿದ್ದರು. ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಯಾವ ಸಾಹಿತಿಗಳಿಗೂ ಕಡಿಮೆ ಇಲ್ಲದ, ಸಾಹಿತಿಗಳೂ ಮೆಚ್ಚುವಂತಹ ಭಾಷಣ ಅವರದಾಗಿರುತಿತ್ತು. ಸಮಾಲೋಚನಾ ಸಭೆಗಳಲ್ಲಿ ವಾದ – ವಿವಾದಗಳು ಉತ್ತುಂಗಕ್ಕೇರಿದಾಗ ಸಮಜಾಯಿಷಿ ನೀಡಿ ಅಥವಾ ಹಾಸ್ಯ ಚಟಾಕಿ ಹಾರಿಸಿ ಅಂತ್ಯ ಕಾಣಿಸುವ ವಿಶೇಷ ಗುಣ ಅವರದ್ದಾಗಿತ್ತು. ಗೋಪಾಲ ಭಂಡಾರಿಯವರು ನಮ್ಮೊಂದಿಗಿಲ್ಲ ನಿಜ. ಆದರೆ, ಅವರ ಜೀವನದ ಆದರ್ಶ ನಮ್ಮ ಮುಂದಿದೆ. ಸಾಗರಕ್ಕೆ ಸಾಗರವೇ ಉಪಮೆ ಎನ್ನುವಂತೆ ಗೋಪಾಲ ಭಂಡಾರಿಯವರಿಗೆ ಸಾಟಿ ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಅವರ ಪುಣ್ಯ ದಿನದಂದು ಅವರ ಆತ್ಮಕ್ಕೆ ಭಗವಂತನ ದಿವ್ಯ ಸನ್ನಿಧಿಯಲ್ಲಿ ಚಿರಶಾಂತಿ ಲಭಿಸಲಿ ಎಂದು ಹಾರೈಸುತ್ತೇನೆ.

ಜಾರ್ಜ್‌ ಕ್ಯಾಸ್ತಲಿನೋ ನಕ್ರೆ
ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಮುಖ್ಯ ಶಿಕ್ಷಕರು



































































































error: Content is protected !!
Scroll to Top