ಬಿರುಸಾಗದ ಮುಂಗಾರು : ರಾಜ್ಯದಲ್ಲಿ ಬರದ ಭೀತಿ

ಜೂನ್‌ನಲ್ಲಿ ಶೇ.77 ಮಳೆ ಕೊರತೆ; ಮುಗಿಲು ದಿಟ್ಟಿಸುತ್ತಿದ್ದಾರೆ ಜನ

ಕಾರ್ಕಳ : ಈ ವರ್ಷ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದು, ರಾಜ್ಯದಲ್ಲಿ ಬರದ ಭೀತಿ ಗೋಚರಿಸಿದೆ. ಈಗಾಗಲೇ ಶೇ.77ರಷ್ಟು ಮುಂಗಾರು ಕೊರತೆಯಾಗಿದೆ. ಅರ್ಥಾತ್‌ ಮಳೆಗಾಲ ಎನ್ನುವುದು ಇನ್ನೂ ಸರಿಯಾಗಿ ಶುರುವಾಗಿಯೇ ಇಲ್ಲ. ಜೂನ್‌ ತಿಂಗಳಲ್ಲಿ ಇಷ್ಟು ಮಳೆ ಕೊರತೆಯಾಗಿರುವುದು ಕಳೆದ 28 ವರ್ಷದಲ್ಲಿ ಇದೇ ಮೊದಲು.
ವಾಡಿಕೆಯಂತೆ ಜೂನ್‌ ಮೊದಲ ವಾರದಲ್ಲಿ ಮುಂಗಾರು ಕರಾವಳಿಯನ್ನು ಪ್ರವೇಶಿಸಿ ಮುಂದೊತ್ತಬೇಕಾಗಿತ್ತು. ಇದೀಗ ಜೂನ್‌ ತಿಂಗಳು ಮುಗಿಯುತ್ತಾ ಬಂದರೂ ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಶುರುವಾಗುವ ಲಕ್ಷಣ ಕಾಣಿಸದೆ ಜನ ಕಂಗಾಲಾಗಿ ಮುಗಿಲು ದಿಟ್ಟಿಸುತ್ತಿದ್ದಾರೆ. ಹವಾಮಾನ ಇಲಾಖೆ ಅರಬಿ ಸಮುದ್ರದಲ್ಲಿ ಎದ್ದ ಬಿಪರ್‌ಜಾಯ್‌ ಚಂಡಮಾರುತದ ಪರಿಣಾಮವಾಗಿ ಮಳೆ ವಿಳಂಬವಾಗಿದೆ ಎನ್ನುತ್ತಿದೆ. ಆದರೆ ಬಿಪರ್‌ಜಾಯ್‌ ಅಪ್ಪಳಿಸಿ ಹೋದರೂ ಮಳೆ ಏಕೆ ಬರುತ್ತಿಲ್ಲ ಎಂದು ಜನ ಕೇಳುತ್ತಿದ್ದಾರೆ.
ಒಂದು ವಾರ ತಡವಾಗಿ ಆಗಮಿಸಿದ ಬಳಿ​ಕ​ ಮುಂಗಾರು ಅತ್ಯಂತ ದುರ್ಬಲವಾಗಿದೆ. ಆಗೊಮ್ಮೆ ಈಗೊಮ್ಮೆ ಐದು ನಿಮಿಷ ಮಳೆ ಸುರಿದು ಉಳಿದಂತೆ ಇಡೀ ದಿನ ಉರಿ ಬಿಸಿಲಿನ ವಾತಾವರಣ ಇರುತ್ತದೆ. ವಾಡಿಕೆ ಪ್ರಕಾರ ಜೂನ್‌ 1ರಿಂದ 10ರ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 51.20 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 14 ಮಿ.ಮೀ ಮಾತ್ರ ಮಳೆಯಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ ಶೇ.77ರಷ್ಟು ಕಡಿಮೆ.
1995ರ ಜೂನ್‌ ಮೊದಲ ವಾರದಲ್ಲಿ ಶೇ.74ರಷ್ಟುಮಳೆ ಕೊರತೆ ಉಂಟಾಗಿತ್ತು. ಆನಂತರ 28 ವರ್ಷದ ಬಳಿಕ ಅ ಅತಿ ಹೆಚ್ಚಿನ ಮಳೆ ಕೊರತೆಯನ್ನು ರಾಜ್ಯ ಈ ಬಾರಿ ಎದುರಿಸಿದೆ. 1971ರಿಂದ 2023ರ ಅವಧಿಯ 53 ವರ್ಷದಲ್ಲಿ ಒಟ್ಟು ಮೂರು ಬಾರಿ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣ ಮಳೆ ಕೊರತೆಯನ್ನು ರಾಜ್ಯ ಎದುರಿಸಿದೆ. 1972ರಲ್ಲಿ ಶೇ.78ರಷ್ಟು, 1995ರಲ್ಲಿ ಶೇ.74ರಷ್ಟುಹಾಗೂ ಪ್ರಸಕ್ತ ಬಾರಿ ಶೇ.72ರಷ್ಟು ಮಳೆ ಕೊರತೆ ಉಂಟಾಗಿದೆ. ವಾಡಿಕೆ ಪ್ರಕಾರ ಜೂನ್‌ 17ರ ವೇಳೆ ರಾಜ್ಯದಲ್ಲಿ ಸರಾಸರಿ 102 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 29 ಮಿ.ಮೀ ಮಾತ್ರ ಮಳೆಯಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಯಾವುದೇ ಜಿಲ್ಲೆಯಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗಿಲ್ಲ.
ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಜೂ.1ರಿಂದ 17 ಅವಧಿಯಲ್ಲಿ ಸರಾಸರಿ 164 ಮಿ.ಮೀ ಮಳೆಯಾಗಬೇಕು. ಆದರೆ, ಕೇವಲ 28 ಮಿ.ಮೀ ಮಳೆಯಾಗಿದೆ. ಈ ಮೂಲಕ ಶೇ.83 ರಷ್ಟು ಕೊರತೆ ಉಂಟಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸರಾಸರಿ 385 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 88 ಮಿ.ಮೀ ಮಳೆಯಾಗುವ ಮೂಲಕ ಶೇ.77 ರಷ್ಟು ಕೊರತೆಯಾದರೆ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸರಾಸರಿ 46 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 20 ಮಿ.ಮೀ ಮಳೆಯಾಗುವ ಮೂಲಕ ಶೇ.55 ರಷ್ಟು ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡು ಜಿಲ್ಲೆಯಲ್ಲಿ ಸರಾಸರಿ 60 ಮಿ.ಮೀ ಮಳೆಯಲ್ಲಿ 19 ಮಿ.ಮೀ ಮಳೆಯಾಗಿದೆ. ಶೇ.69 ರಷ್ಟು ಮಳೆ ಕೊರತೆಯಾಗಿದೆ.

ನೀರಿಗೆ ಹಾಹಾಕಾರ

ಈ ಸಲ ಬೇಸಿಗೆ ಬಹಳ ತೀವ್ರವಾಗಿತ್ತು. ಉರಿ ಬಿಸಿಲಿನಿಂದಾಗಿ ನದಿ, ಕೆರೆ, ಹಳ್ಳ, ಬಾವಿ, ಬೋರ್‌ವೆಲ್‌ ಎಲ್ಲ ಬತ್ತಿಹೋಗಿ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಜಲಕ್ಷಾಮ ತಲೆದೋರಿತ್ತು. ಇದೀಗ ಜೂನ್‌ ತಿಂಗಳು ಮುಗಿಯುತ್ತಾ ಬಂದರೂ ಬಹುತೇಕ ಕಡೆ ನೀರಿನ ಸಮಸ್ಯೆ ಮುಂದುವರಿದಿದೆ. ಹೆಚ್ಚಿನೆಡೆ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ.
ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂ ಬತ್ತಿ ಹೋಗಿ ಐದು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಗುಂಡಿಗಳಿಂದ ನೀರು ಎತ್ತಿ ಪೂರೈಸಲಾಗುತ್ತಿತ್ತು. ಇದೀಗ ಗುಂಡಿಗಳಲ್ಲೂ ನೀರು ಮುಗಿದಿದ್ದು, ಒಂದೆರಡು ದಿನದಲ್ಲಿ ಭರ್ಜರಿ ಮಳೆ ಸುರಿಯದಿದ್ದರೆ ಜನರಿಗೆ ನೀರೇ ಇಲ್ಲದ ಸ್ಥಿತಿ ಉಂಟಾಗಲಿದೆ.

ಶುರುವಾಗದ ಕೃಷಿ ಕಾರ್ಯ

ಮಳೆಯಿಲ್ಲದ ಕಾರಣ ರೈತರು ಇನ್ನೂ ಗದ್ದೆಗೆ ಇಳಿದಿಲ್ಲ. ಸಾಮಾನ್ಯವಾಗಿ ಈ ಹೊತ್ತಿಗೆಲ್ಲ ಉತ್ತು, ಬಿತ್ತನೆ ಮುಗಿಯಬೇಕಿತ್ತು. ನೀರಿಲ್ಲದ ಕಾರಣ ರೈತರು ಇನ್ನೂ ಉಳುಮೆಯನ್ನೇ ಮಾಡಿಲ್ಲ. ಇನ್ನು ಮಳೆ ಬಂದರೂ ಕೃಷಿಯ ಸಮಯ ಹೊಂದಾಣಿಕೆಯಾಗದೆ ಸಮಸ್ಯೆಯಾಗಲಿದೆ. ಹಡಿಲು ಭೂಮಿ ಪ್ರಮಾಣ ಕಳವಳಕಾರಿಯಾಗಿ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.































































error: Content is protected !!
Scroll to Top