ಸತ್ಯ ನುಡಿದರೆ ಮೊಕದ್ದಮ್ಮೆ ದಾಖಲಾಗುವುದಾದರೆ ಎದುರಿಸಲು ಸಿದ್ದ
ಕಾರ್ಕಳ : ಕಾರ್ಕಳದ ಪ್ರತಿಷ್ಠಿತ ಸಂಸ್ಥೆಯ ಕಟ್ಟಡ ತೆರಿಗೆ ನಿಗದಿ ಸಂಬಂಧಿಸಿದಂತೆ ಬಿಜೆಪಿಯ ಕೆಲವು ಸದಸ್ಯರು ಲಕ್ಷಾಂತರ ರೂಪಾಯಿ ಪಡೆದು ಪುರಸಭೆಗೆ ಹಾಗೂ ಸಂಸ್ಥೆಗೆ ವಂಚಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಸತ್ಯವಾದ ಆರೋಪವನ್ನು ನಾನು ಮಾಡಿದ್ದೆ. ಆದರೆ ಸತ್ಯ ಮಾತನಾಡುವುದೇ ಅಪರಾಧ ಎನ್ನುವ ರೀತಿಯಲ್ಲಿ ನನ್ನ ಮೇಲೆ ವೈಯಕ್ತಿಕ ಟೀಕೆಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದು, ಆರೋಪಕ್ಕೆ ಉತ್ತರ ನೀಡಬೇಕಾದ ಪುರಸಭಾ ಸದಸ್ಯ ಎಲ್ಲೆ ಮೀರಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ. ಆದರೆ ಎಷ್ಟೇ ಟೀಕೆಗಳನ್ನು ಮಾಡಿ ಮೊಕದ್ದಮೆ ದಾಖಲಿಸಿದರೂ ನಾನು ಸತ್ಯ ಮಾತನಾಡುವುದನ್ನು ನಿಲ್ಲಿಸಲಾರೆ. ಹಣ ಕೊಟ್ಟವರು ಮತ್ತು ಪಡೆದವರು ಯಾರೆಂದು ನ್ಯಾಯಾಲಯದಲ್ಲೇ ಬಹಿರಂಗಪಡಿಸುವೆ ಎಂದು ಪುರಸಭಾ ಸದಸ್ಯ ಶುಭದ ರಾವ್ ತಿಳಿಸಿದ್ದಾರೆ.
ಹಣ ಎಷ್ಟು ಕೊಟ್ಟಿದ್ದೇವೆ ಎನ್ನುವುದು ಕೊಟ್ಟ ಸಂಸ್ಥೆಗೆ ಗೊತ್ತಿದೆ, ಅವರಿಂದ ನಾನು ಎಷ್ಟು ಪಡೆದಿದ್ದೇನೆ ಎನ್ನುವುದು ಪಡೆದವನಿಗೂ ತಿಳಿದಿದೆ. ಹಾಗೆಯೇ ನಮ್ಮ ಸದಸ್ಯರ ತಪ್ಪಿದೆ ಎಂದು ಪಕ್ಷದ ನಾಯಕರಿಗೂ ಗೊತ್ತಿದೆ. ಇನ್ನೂ ಇದಕ್ಕೆ ಸಾಕ್ಷಿ, ದಾಖಲೆ ಬೇಕೆ? ಆತ್ಮಸಾಕ್ಷಿಗಿಂತ ದೊಡ್ಡ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿದ್ದೂ ಅದನ್ನು ಸಮರ್ಥಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡದಂತಾಗುತ್ತದೆ. ಪುರಸಭಾ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂದು ಕೆಲವು ಪುರಸಭಾ ಸದಸ್ಯರಿಗೆ ಪಕ್ಷದ ಮುಖಂಡರು ತಿಳಿಹೇಳುವ ಅನಿವಾರ್ಯತೆ ಇದೆ ಎಂದು ಬಿಜೆಪಿ ಮುಖಂಡರಲ್ಲಿ ಮನವಿ ಮಾಡುತ್ತೇನೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
























