ಪರಶುರಾಮ ಥೀಮ್‌ ಪಾರ್ಕ್ ಹೋಗುವ ರಸ್ತೆ ತಿರುವಿನಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ

ರಸ್ತೆಯಲ್ಲೇ ಹರಿಯುವ ನೀರು – ಅಪಘಾತಕ್ಕೆ ದಾರಿ

ಕಾರ್ಕಳ : ಮುಂಗಾರು ವಿಳಂಬವಾದರೂ, ಕೊನೆಗೂ ಮಳೆ ಪ್ರಾರಂಭವಾಗಿದೆ. ಎಲ್ಲೆಲ್ಲೂ ವಿಪರೀತ ಸೆಖೆ, ನೀರಿನ ಅಭಾವದಿಂದ ತತ್ತರಿಸಿದ ಜನರಿಗೆ ಮಳೆರಾಯ ತಂಪೆರಿದಿದ್ದಾನೆ. ನಿನ್ನೆ ಸುರಿದ ಪ್ರಥಮ ಮಳೆಗೆ ರಸ್ತೆಯ ಮೇಲೆಯೇ ನೀರು ಹರಿಯುವ ದೃಶ್ಯ ಬೈಲೂರಿನ ಹಲವು ಕಡೆ ಕಂಡು ಬಂದಿದೆ. ನೀರು ಹರಿದು ಹೋಗಲು ಸಮರ್ಪಕ ಚರಂಡಿ ಇಲ್ಲದೆ, ಮುಂಗಾರು ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಗಮನಾರ್ಹವಾಗಿದೆ.

ಕಾರ್ಕಳ- ಉಡುಪಿ ಹೆದ್ದಾರಿಯಲ್ಲಿ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಹೋಗುವ ರಸ್ತೆ ತಿರುವಿನಲ್ಲಿ ನೀರು ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಸರಿಪಡಿಸಿಲ್ಲ. ಜನವರಿಯಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣೆಯ ಸಂದರ್ಭ ಜನಸಂದಣಿ ನಿಯಂತ್ರಿಸಲು ಮತ್ತು ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸಲು ಮೊದಲು ಇದ್ದಂತಹ ಚರಂಡಿಯನ್ನು ಮುಚ್ಚಲಾಗಿತ್ತು. ಆದರೆ ಈಗ ಒಂದು ಬದಿ ಸ್ವಲ್ಪ ಚರಂಡಿಯನ್ನು ಮಾಡಿರುತ್ತಾರೆ, ಆದರೆ ಮತ್ತೊಂದು ಬದಿಯ ಚರಂಡಿಯನ್ನು ತೆರೆದಿಲ್ಲ. ಚರಂಡಿ ಮಾಡಿದಲ್ಲಿ ಕೂಡ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು, ಮೊದಲ ಮಳೆಗೇ ರಸ್ತೆ ಮೇಲೆ ಮಳೆ ನೀರು ನಿಲ್ಲುವಂತಾಗಿದೆ. ದಿನಂಪ್ರತಿ ನೂರಾರು ಪ್ರವಾಸಿಗರು ಪರಶುರಾಮ ಥೀಮ್ ಪಾರ್ಕ್ ಗೆ ಭೇಟಿ ನೀಡುತ್ತಿದ್ದಾರೆ. ಆದರೆ ರಸ್ತೆ ಮೇಲೆ ನೀರು ಹರಿಯುವುದರಿಂದ ಕಾರು , ದ್ವಿಚಕ್ರ ವಾಹನಗಳು ನಿಂತ ನೀರಿನ ಆಳ, ಅಗಲ ತಿಳಿಯದೆ ಅಪಘಾತಕ್ಕೆ ತುತ್ತಾಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಪಾದಚಾರಿಗಳು, ಶಾಲಾ ಮಕ್ಕಳು ಈ ದಾರಿಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ಮಳೆಯ ಕೆಸರು ನೀರು ತೊಂದರೆ ಕೊಡುವುದಂತೂ ಸತ್ಯ. ವಿದ್ಯುತ್ ಕಂಬಗಳ ಬುಡದಲ್ಲಿ ಮಣ್ಣು ಗಟ್ಟಿಯಾಗಿರದೆ ಮುಂದಿನ ದಿನಗಳಲ್ಲಿ ಉರುಳುವ ಸ್ಥಿತಿ ಇದೆ, ಇದು ದೊಡ್ಡ ಅವಘಡಕ್ಕೆ ಕಾರಣವಾಗಬಹುದು.

ಇತ್ತೀಚೆಗೆ ಈ ತಿರುವಿನಲ್ಲಿ ಹಲವಾರು ವಾಹನ ಅಪಘಾತ ಸಂಭವಿಸಿದೆ, ಮತ್ತೆ ಮಳೆಗಾಲದಲ್ಲಿ ಮತ್ತಷ್ಟು ಅಪಘಾತವಾಗದಂತೆ ತಡೆಯಬೇಕಾಗಿದೆ. ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಕೂಡಲೇ ಎಚ್ಚೆತ್ತು, ಮಳೆಯ ತೀವ್ರತೆ ಹೆಚ್ಚಾಗುವ ಮುನ್ನ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿ ಮಳೆಗಾಲದ ನೀರು ಹರಿದು ಹೋಗುವಂತೆ ಮಾಡುವುದು ಉತ್ತಮ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಅಸರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ರಸ್ತೆಯಲ್ಲಿ ಹರಿದ ನೀರು






































































error: Content is protected !!
Scroll to Top