ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ವತಿಯಿಂದ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಆಗುಂಬೆಯ ಘಾಟ್ ರಸ್ತೆ ಇಕ್ಕೆಲಗಳನ್ನು ಶನಿವಾರ ಸ್ವಚ್ಛಗೊಳಿಸಿದರು.
“ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಸ್ವಚ್ಛತಾ ಕಾರ್ಯಕ್ಕೂ ಮುನ್ನ ಮಾತನಾಡಿದ ಕ್ರಿಯೇಟಿವ್ ಪ್ರಾಂಶುಪಾಲ ಗಣಪತಿ ಭಟ್, ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಭೇದಗಳಿವೆ. ನಾವು ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಅವುಗಳ ಜೀವನ ದುಸ್ತರವಾಗುವಂತಾಗಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳುಗೆಡಹುವ ಕಾರ್ಯ ಬಿಟ್ಟು ಸಾಧ್ಯವಾದಷ್ಟು ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.
ಪರಿಸರ ರಕ್ಷಣೆ ವಿಚಾರ ಬಂದಾಗ ಶಿಕ್ಷಿತರೂ ಕೆಲವೊಮ್ಮೆ ಅನಕ್ಷರಸ್ಥರಂತೆ ವರ್ತಿಸುತ್ತೇವೆ. ನಾವು ಬಳಸಿದ ತ್ಯಾಜ್ಯ ವಸ್ತುಗಳನ್ನು, ಕಸ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಜವಾಬ್ದಾರಿಯಿಲ್ಲದೇ ಕಂಡಲ್ಲಿ ಎಸೆಯುತ್ತೇವೆ. ಅದು ಕಾಡಿನ ಪರಿಸರವನ್ನು ಮಾಲಿನ್ಯಗೊಳಿಸಿ ಅಲ್ಲಿನ ಪ್ರಾಣಿಪಕ್ಷಿಗಳಿಗೂ ತೊಂದರೆಯುಂಟು ಮಾಡುತ್ತಿದೆ. ಆದ್ದರಿಂದ ಪ್ರವಾಸಿ ಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಂತ ಕಾಳಜಿಯಿಂದ ಸುಂದರವಾಗಿಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಎನ್ಎಸ್ಎಸ್ ನ ಯೋಜನಾಧಿಕಾರಿ ಉಮೇಶ್ ಕರೆ ನೀಡಿದರು.
ಶಿರ್ಡಿ ಡಿಗ್ರಿ ಕಾಲೇಜಿನ ಆಶೀಶ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ಪ್ರಜ್ಞೆ ಅಗತ್ಯ. ಎಲ್ಲರೂ ಬದುಕಿ ಬಾಳುವ ವಾತಾವರಣ ನಿರ್ಮಾಣ ಮಾಡಬೇಕೆಂದರು.
ಆಗುಂಬೆಯ ಘಾಟಿಯ ಆರಂಭದಿಂದ ಸೋಮೇಶ್ವರದ ವರೆಗೆ ಕ್ರಿಯೇಟಿವ್ ಕಾಲೇಜು ಹಾಗೂ ಶಿರ್ಡಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು. ಉಪನ್ಯಾಸಕ ಚಂದ್ರಕಾಂತ ಆಚಾರ್ಯ, ಶ್ರೀನಿಧಿ, ಪ್ರಿಯಾಂಕ, ತಿಪ್ಪೇಸ್ವಾಮಿ, ಶಶಿಧರ ಭಟ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್, ಚ್ರೈತ್ರಾ, ಆರ್‌ಎಫ್‌ಒ ಗೌರವ್ ಹಾಗೂ ಅರಣ್ಯಾಧಿಕಾರಿಗಳು ಮತ್ತು ಶಿರ್ಡಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.
ಕ್ರಿಯೇಟಿವ್ ಹಾಗೂ ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ರಸ್ತೆ ಸ್ವಚ್ಛತೆ


































