ಬೆಂಗಳೂರು : ಕಾಂಗ್ರೆಸ್ ಪಕ್ಷದ ಶಾಸಕರು ಅಲ್ಲ, ವಿಧಾನಪರಿಷತ್ತಿನ ಸದಸ್ಯರೂ ಅಲ್ಲ ಆದರೂ ಎನ್.ಎಸ್. ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಘಟಾನುಘಟಿ ಬಿಜೆಪಿ ನಾಯಕರ ವಿರುದ್ಧವೇ ಜನರಿಂದ ಆಯ್ಮೆಯಾಗಿ ವಿಧಾನಸಭೆಗೆ ಬಂದಿದ್ದೇವೆ ಆದರೂ ಜನಪ್ರತಿನಿಧಿಯಲ್ಲದ ಬೋಸರಾಜ್ಗೆ ಹೇಗೆ ಸಚಿವ ಸ್ಥಾನ ಸಿಕ್ಕಿತ್ತು ಎಂದು ಕಾಂಗ್ರೆಸ್ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಬೋಸರಾಜ್ ಅವರಿಗೆ ಮಂತ್ರಿಭಾಗ್ಯ ದೊರೆತ್ತಿದ್ದೇ ಹೈಕಮಾಂಡ್ನಿಂದ. ಅವರು ಕ್ಷೇತ್ರ ತ್ಯಾಗ ಮಾಡಿದ್ದರಿಂದ ಮಂತ್ರಿಗಿರಿ ಸಿಕ್ಕಿದೆ ಎಂದು ತಿಳಿದುಬಂದಿದೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ಹೈಕಮಾಂಡ್ನಿಂದಲೇ ಬೋಸರಾಜ್ ಅವರಿಗೆ ಮಂತ್ರಿಭಾಗ್ಯ ಒಲಿದುಬಂದಿದೆ. ರಾಯಚೂರು ನಗರ ಕ್ಷೇತ್ರ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ನೀಡಲು ನಿರ್ಧಾರವಾಗಿತ್ತು. ಆದರೆ ಬೋಸರಾಜ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮ್ಮ ಪುತ್ರ ರವಿ ಬೋಸರಾಜ್ ಅವರಿಗೆ ಈ ಬಾರಿ ಟಿಕೆಟ್ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದರು. ರಾಜ್ಯ ನಾಯಕರು ಎಷ್ಟೇ ಮನವೊಲಿಸುವ ಪ್ರಯತ್ನ ಪಟ್ಟಿದ್ದರೂ ಅವರು ಬಗ್ಗಿರಲಿಲ್ಲ. ಕೊನೆಗೆ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಬೋಸರಾಜ್ ಅವರ ಮನವೊಲಿಸಿತ್ತು. ಖುದ್ದು ರಾಹುಲ್ ಗಾಂಧೀ ಅವರೇ ಬೋಸರಾಜ್ ಜೊತೆ ಮಾತುಕತೆ ನಡೆಸಿ, ಸರ್ಕಾರ ಬಂದರೆ ಎಂಎಲ್ಸಿ ಮಾಡಿ ಪ್ರಮುಖ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಬೋಸರಾಜ್ಗೆ ಅಚ್ಚರಿ ರೀತಿಯಲ್ಲಿ ಮಂತ್ರಿ ಸ್ಥಾನ ಒಲಿದುಬಂದಿದೆ. ಈ ಮೂಲಕ ಹೈಕಮಾಂಡ್ ಚುನಾವಣೆ ಸಂದರ್ಭದಲ್ಲಿ ಬೋಸರಾಜ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಮೇಲ್ಮನೆ ಸದಸ್ಯರಾದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ಗೆ ಅವಕಾಶ ತಪ್ಪಿಸಿ ಬೋಸರಾಜು ಅವರನ್ನು ಆಯ್ಕೆ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಲ್ಲದೇ ಇದಕ್ಕೆ ಕಾಂಗ್ರೆಸ್ನಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.





































