ಮಂಗಳೂರು : ದ. ಕ. ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯೆಗಳ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮೇ 26 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ. ಕ. ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯೆಗಳಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ಅನೇಕ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಶರತ್ ಮಡಿವಾಳ, ಅಶ್ರಫ್, ಜಲೀಲ್, ಮಸೂದ್, ಪ್ರವೀಣ್ ನೆಟ್ಟಾರು ಇನ್ನೂ ಅನೇಕ ಅಮಾಯಕರು ಜೀವ ಕಳೆದುಕೊಂಡಿದ್ದು, ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಗಳ ಕಾರ್ಯಕರ್ತರು ಇರಬಹುದು ಎಂದರು. ಒಬ್ಬರೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ನಾನು ಅನೇಕ ಬಾರಿ ಪುನರುಚ್ಚರಿಸಿದ್ದೇನೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹತ್ಯೆ ಮಾಡಿಸಿದ್ದಾರೆ ಎಂದು ಹೇಳಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ಜಿಲ್ಲಾ ಘಟಕ ಮುಂದಾಗಿದೆ. ಈ ಬಗ್ಗೆ ಕೂಡ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.