ಮರುದಾನ ಮತದಾನಕ್ಕೆ ಕಾಂಗ್ರೆಸಿಗರಿಂದ ಆಗ್ರಹ
ಕಾರ್ಕಳ : ಮಿಯ್ಯಾರು ಸಮಾಜ ಮಂದಿರದ ಮತಗಟ್ಟೆಯಲ್ಲಿ ಅಕ್ರಮ ಮತದಾನವಾಗಿದ್ದು, ಇದಕ್ಕೆ ಕುಮ್ಮಕ್ಕು ನೀಡಿದವರಿಗೆ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ಶೇಖ್ ಶಬೀರ್ ಆಗ್ರಹ ವ್ಯಕ್ತಪಡಿಸಿದರು.
ಮೇ 11 ರಂದು ಕಾರ್ಕಳ ಪ್ರಕಾಶ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಮಿಯ್ಯಾರಿನ ಸುಹಾಸ್ ಶೆಟ್ಟಿ ಎಂಬವರು ವಿದೇಶದಲ್ಲಿದ್ದು ಅವರ ಆಧಾರ್ ಕಾರ್ಡ್ ಬಳಸಿ ಧೀರಜ್ ಎಂಬ ಅಪ್ರಾಪ್ತ ಬಾಲಕ ಮತ ಚಲಾಯಿಸಿದ್ದಾನೆ. ಈ ಕುರಿತು ಮತಗಟ್ಟೆ ಅಧಿಕಾರಿಯ ಗಮನಕ್ಕೆ ತರಲಾಗಿದ್ದರೂ ಮತಗಟ್ಟೆ ಅಧಿಕಾರಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಎಲ್ಲ ಮತಗಟ್ಟೆಯಲ್ಲೂ ಅಕ್ರಮ ಮತದಾನವಾಗಿರುವ ಸಂಶಯವಿದೆ. ಹೀಗಾಗಿ ಕ್ಷೇತ್ರದಲ್ಲಿ ಮರುಮತದಾನವಾಗಬೇಕೆಂದು ಶಬೀರ್ ಆಗ್ರಹಿಸಿದರು.
ಲಾಠಿ ಚಾರ್ಜ್
ಮತದಾನ ಪ್ರಕ್ರಿಯೆ ಮುಗಿದ ಬಳಿಕ ಲೈಟ್ ಆಫ್ ಮಾಡಿ ಮತಯಂತ್ರವನ್ನು ಸಾಗಿಸುವ ಯತ್ನವಾಗಿದೆ. ಮತಯಂತ್ರವನ್ನು ತುಂಬಿಸಿ ಡಿ ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಸಿದ್ಧವಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಶಬೀರ್ ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಧೀರಜ್ ನನ್ನು ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ವಿಚಾರಣೆ ಮಾಡಿ ಬಿಡುಗಡೆಗೊಳಿಸಲಾಗಿದೆ. ಈ ಅಕ್ರಮ ಮತದಾನಕ್ಕೆ ಸಂಬಂಧಿಸಿದಂತೆ ಗ್ರಾಮದ ಇಬ್ಬರ ವಿರುದ್ಧ ಅನುಮಾನ ವ್ಯಕ್ತಪಡಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ ಎಂದವರು ಮಾಹಿತಿ ನೀಡಿದರು. ಮಿಯ್ಯಾರು ಗ್ರಾಮದ ಕಾಂಗ್ರೆಸ್ ಮುಖಂಡರಾದ ತಾರನಾಥ್ ಕೋಟ್ಯಾನ್, ಮಂಜುನಾಥ್ ಕೋಟ್ಯಾನ್ , ಐತಪ್ಪ, ಪದ್ಮಾಕರ್ ಹಾಗೂ ಶೇಖರ್ ಉಪಸ್ಥಿತರಿದ್ದರು.

























