ಹುಬ್ಬಳ್ಳಿಯ ಸಾರ್ವಜನಿಕ ಸಭೆಯಲ್ಲಿ ಭಾಷಣ
ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೇ 6ರಂದು ರಾಜ್ಯಕ್ಕೆ ಆಗಮಿಸಲಿದ್ದು, ಹುಬ್ಬಳ್ಳಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್‌ನ ಹಲವು ನಾಯಕರು ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ನಾಯಕರುಗಳೊಂದಿಗೆ ಭಾಗವಹಿಸಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದರ ಜತೆಗೆ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಪ್ರಮುಖರಾದ ಸೋನಿಯಾ ಗಾಂಧಿ ಅವರುಬಹಳ ವರ್ಷಗಳ ಬಳಿಕ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ ದಿಲ್ಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಅವರು ಹುಬ್ಬಳ್ಳಿಯಲ್ಲಿ ಪಕ್ಷ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ. ಸಂಜೆ ದಿಲ್ಲಿಗೆ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.



































