ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಗೆಲುವು – ಉದಯ ಕುಮಾರ್‌ ಶೆಟ್ಟಿ

ಭಾಷಣದಿಂದ ದೇಶ ಕಟ್ಟಲು ಸಾಧ್ಯವಿಲ್ಲ – ರಾಕೇಶ್‌ ಶೆಟ್ಟಿ

ಕಾರ್ಕಳ : ಎಂಎಲ್ಎ ಆಗುವುದು ಶ್ರೀಮಂತಿಕೆಗಾಗಿ ಅಲ್ಲ. ಬದಲಾಗಿ ಜನಸೇವೆಗಾಗಿ. ಉದಯ ಕುಮಾರ್ ಶೆಟ್ಟಿಯವರ ಮಾತಿನಲ್ಲಿ ಸರಳತೆ, ಸಹಾನೂಭೂತಿಯಿದೆ. ಇದನ್ನು ಕಂಡಾಗ ನಾನು 6 ತಿಂಗಳ ಹಿಂದೆ ಮಾಡಿದ್ದ ಶಪಥ ಈಡೇರುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿಮತ ವ್ಯಕ್ತಪಡಿಸಿದರು.
ಅವರು ಮೆ 1ರಂದು ಕಾಂಗ್ರೆಸ್‌ ವತಿಯಿಂದ ಬಂಡಿಮಠದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದರು. ಬಡವನ ಮಗನೂ ಶಾಸಕನಾಗಬಹುದು ಎಂಬುದಕ್ಕೆ ನಾನು, ಗೋಪಾಲ ಭಂಡಾರಿ ಅವರೇ ಸಾಕ್ಷಿ. ಇದೀಗ ಆ ಸಾಲಿನಲ್ಲಿ ಉದಯ ಕುಮಾರ್‌ ಗುರುತಿಸಿಕೊಳ್ಳಲಿದ್ದಾರೆ ಎಂದರು.

ಬಿಜೆಪಿಗೆ ಸಮಾನತೆ ಬೇಕಿಲ್ಲ
ಬಿಜೆಪಿಗೆ ಸಾಮಾಜಿಕ ಸಮಾನತೆ ಬೇಕಾಗಿಲ್ಲ. ಬದಲಾಗಿ ಸಮಾಜದಲ್ಲಿ ಶಾಂತಿ ಕದಲುವಿಕೆಯಾಗಬೇಕು. ಬಿಜೆಪಿ ಭೂ ಮಸೂದೆಯ ವಿರುದ್ಧ ಕೆಲಸ ಮಾಡಿದೆ ಎಂದು ವೀರಪ್ಪ ಮೊಯ್ಲಿ ಆರೋಪಿಸಿದರು.

ಸುನಿಲ್ ಕುಮಾರ್ ಇಲಾಖೆಯ ಕೆಲಸವನ್ನು ಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಿದ್ದಾರೆ. ಕಾರ್ಕಳದಲ್ಲಿ ಒಂದು ಸೋಲಾರ್ ಪಾರ್ಕ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕಗೊಂಡ ಲೈನ್ ಮಾನ್ ಗಳಿಗೆ ಇನ್ನೂ ನೇಮಕಾತಿ ಪತ್ರ ದೊರೆತಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸುಧೀರ್‌ ಮರೋಳಿ ಆಪಾದಿಸಿದರು.

ಇದು ಅಲ್ಲಾ ವರ್ಸಸ್ ರಾಮ ಚುನಾವಣೆಯಲ್ಲ. ಸರ್ವಧರ್ಮದ ದೇವರ ಆಶೀರ್ವಾದ ಕಾಂಗ್ರೆಸ್ ನ ಮೇಲಿದೆ. ಅಧಿಕಾರ, ಶ್ರೀಮಂತಿಕೆ ಬಂದಾಗ ಬೀಗುವ ಬದಲು ಬಾಗುವ ವ್ಯಕ್ತಿತ್ವ ರೂಪುಗೊಳ್ಳಬೇಕು. ಆದರೆ ಸುನಿಲ್ ಕುಮಾರ್ ಅಧಿಕಾರದ ದರ್ಪ ತೋರ್ಪಡಿಸಿದರು ಎಂದು ಮರೋಳಿ ಹೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 1 ಕೆ.ಜಿ. ಉಪ್ಪಿನ ಬೆಲೆ 5 ರೂ. ಇತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ಉಪ್ಪಿನ ದರ 25, 35 ಕ್ಕೆ ಏರಿಕೆಯಾಗಿದೆ ಎಂದು ಸುಧೀರ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. ಉಡುಪಿ ಜಿಲ್ಲೆಯಲ್ಲಿ 4 ಅಭ್ಯರ್ಥಿಗಳನ್ನು ಈ ಬಾರಿ ಬಿಜೆಪಿ ಬದಲಾಯಿಸಿದೆ. ಆದರೆ ಕಾರ್ಕಳದ ಅಭ್ಯರ್ಥಿಯನ್ನು ಜನರೇ ಬದಲಾಯಿಸುತ್ತಾರೆ ಎಂದು ಮರೋಳಿ ಲೇವಡಿ ಮಾಡಿದರು.

ಕರ್ನಾಟಕಕ್ಕೆ ಡಬಲ್ ಇಂಜಿನ್ ಸರಕಾರದ ಅವಶ್ಯಕತೆಯಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ಪಕ್ಷದ ಗ್ಯಾರಂಟಿ ಕಾರ್ಡ್ ಅನ್ನವುದು ಭರವಸೆ ಅಥವಾ ಪ್ರಣಾಳಿಕೆ ಅಲ್ಲ. ರಾಹುಲ್ ಗಾಂಧಿಯವರು ಹೇಳಿದಂತೆ ಮುಖ್ಯಮಂತ್ರಿ ಆಯ್ಕೆಯಾದ ಪ್ರಥಮ ಸಂಪುಟ ಸಭೆಯಲ್ಲೇ ಗ್ಯಾರಂಟಿ ಕಾರ್ಡ್‌ ಅನುಷ್ಠಾನಗೊಳ್ಳಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಮಾತನಾಡಿ, 13ನೇ ತಾರೀಖಿನ ವಿಜಯೋತ್ಸವ ಇಂದು ಸೇರಿರುವ ಜನ ಸಂಖ್ಯೆಯಲ್ಲಿ ಕಾಣುತ್ತಿದೆ ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಗೆಲುವು
ಕಾರ್ಕಳದಲ್ಲಿ ಬಿಜೆಪಿ ಕಾರ್ಯಕರ್ತರೂ ಬದಲಾವಣೆ ಬಯಸಿದ್ದಾರೆ. ಕಾರ್ಕಳದಲ್ಲಿ ಕಾಂಗ್ರೆಸ್‌ ಗೆಲುವು ಅದು ಉದಯ ಕುಮಾರ್‌ ಗೆಲುವಲ್ಲ. ಅದು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಗೆಲುವಾಗಲಿದೆ. ನಾನು ಬರೀ ಉದ್ಯೋಗದಲ್ಲೇ ಇದ್ದರೆ ಅದು ನನ್ನ ಕುಟುಂಬಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಸಮಾಜಕ್ಕಾಗಿ ರಾಜಕೀಯ ಆಯ್ಕೆ ಮಾಡಿಕೊಂಡೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಉದಯ ಕುಮಾರ್‌ ಶೆಟ್ಟಿ ಹೇಳಿದರು.

ನಿಮ್ಮ ಮನೆ ಮಗನಂತೆ ನಾನು ಕಾರ್ಯನಿರ್ವಹಿಸಲಿದ್ದೇನೆ. ಸ್ವಂತಕ್ಕಾಗಿ ಏನು ಬೇಡ ಎಂದು ಹೇಳಿದ ಉದಯ ಶೆಟ್ಟಿ ಅವರು ಹಿಂದೂ ಧರ್ಮ ಹೃದಯದಲ್ಲಿರಬೇಕೇ ಹೊರತು ಭಾಷಣದಲ್ಲಿ ಅಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಜನತೆಗೆ ಏನು ಮಾಡುತ್ತೇವೆ ಎಂಬುದಕ್ಕೆ ಅವರಲ್ಲಿ ಉತ್ತರವಿಲ್ಲ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೆ ಗ್ಯಾರಂಟಿ ಕಾರ್ಡ್ ಅನುಷ್ಟಾನಗೊಳ್ಳಲಿದೆ ಎಂದರು.

ಸತ್ಯದ ದಾರಿಯಲ್ಲಿ ಮತ ಯಾಚಿಸೋಣ
ಇಂದಿನ ಉತ್ಸಾಹ ಹೀಗೆ ಇರಲಿ. ಧರ್ಮ ಮತ್ತು ಸತ್ಯದ ದಾರಿಯಲ್ಲಿ ಮತ ಯಾಚಿಸೋಣ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಯನ್ನು ತಲುಪುವ ಕೆಲಸ ಮಾಡೋಣ ಎಂದು ಉದಯ ಶೆಟ್ಟಿ ಹೇಳಿದರು.

ಪವರ್ ಟಿವಿ ಎಂ.ಡಿ. ರಾಕೇಶ್‌ ಶೆಟ್ಟಿ ಮಾತನಾಡಿ, ಭಾಷಣದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಭಾಷಣಕ್ಕೆ ಮರುಳಾಗದೆ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಜಾತಿ ಆಧಾರದಲ್ಲಿ ಮತವನ್ನು ವಿಭಜಿಸದಿರಿ. ಕಾರ್ಕಳವನ್ನು ಬೆಳಗಿಸುವುದು ಕೃತಕ ಬೆಳಕಿನಿಂದಲ್ಲ. ಪ್ರಜ್ಞಾವಂತ, ಪದವೀಧರ ನಾಯಕನ ಆಯ್ಕೆಯಿಂದ ಅದು ಆಗಲಿ ಎಂದರು.

ಕಾಂಗ್ರೆಸ್‌ ಸೇರ್ಪಡೆ
ಕುಕ್ಕುಂದೂರು ಗ್ರಾ. ಪಂ. ಉಪಾಧ್ಯಕ್ಷ ಅನಿಲ್‌ ಪೂಜಾರಿ, ನಾಟಕ ಕಲಾವಿದ ಸುನಿಲ್‌ ನೆಲ್ಲಿಗುಡ್ಡೆ ಮೊದಲಾದವರು ಈ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು.

ಜನಸ್ತೋಮ
ಸಮಾವೇಶಕ್ಕೂ ಮುನ್ನ ಸ್ವರಾಜ್‌ ಮೈದಾನದಿಂದ ಬಂಡಿಮಠವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಸಾಗರೋಪಾದಿಯಲ್ಲಿ ಜಾಥಾದಲ್ಲಿ ಜನತೆ ಪಾಲ್ಗೊಂಡರು. ಹುಲಿವೇಷ, ಕೊಂಬು, ಚೆಂಡೆ ಮೆರವಣಿಗೆಗೆ ಮೆರುಗು ನೀಡಿತು.

ಕೇರಳ ಸಂಸದ ಪ್ರತಾಪನ್, ಹರ್ಷ ಮೊಯ್ಲಿ, ಜಿ. ಎ. ಬಾವ, ದೇವಿಪ್ರಸಾದ್ ಶೆಟ್ಟಿ ಬೆಳಪು, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಚಂದ್ರ ಶೇಖರ ಬಾಯಾರಿ, ಸದಾಶಿವ ದೇವಾಡಿಗ, ಗಿರೀಶ್ ಶೆಟ್ಟಿ, ಮಂಜುನಾಥ ಪೂಜಾರಿ, ಡಿ. ಆರ್. ರಾಜು, ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಎಂ. ಎ. ಗಫೂರ್, ಕುಕ್ಕುಂದೂರು ಗ್ರಾ. ಪಂ. ಸದಸ್ಯ ಉದಯ್ ಕುಮಾರ್ ಶೆಟ್ಟಿ, ಕೃಷ್ಣ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮ್ಯ ಸುಧೀಂದ್ರ ಪ್ರಾರ್ಥಿಸಿ, ಶೇಖರ್‌ ಮಡಿವಾಳ್‌ ಸ್ವಾಗತಿಸಿದರು. ಶುಭದ ರಾವ್ ನಿರೂಪಿಸಿದರು.





































































error: Content is protected !!
Scroll to Top