ಮೋದಿ ಕುಲನಾಮ ಅವಹೇಳನ ಪ್ರಕರಣ : ರಾಹುಲ್‌ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶೆ

ಬೇರೊಂದು ಪೀಠಕ್ಕೆ ಅರ್ಜಿ ವರ್ಗಾಯಿಸಲು ಹೇಳಿದ ಜಡ್ಜ್‌ ಗೀತಾ ಗೋಪಿ

ಹೊಸದಿಲ್ಲಿ : ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ನಿಯೋಜಿಸಲಾಗಿದ್ದ ಗುಜರಾತ್‌ ಹೈಕೋರ್ಟ್‌ನ ಜಡ್ಜ್‌ ವಿಚಾರಣೆ ಮಾಡಲೊಪ್ಪದೆ ಹಿಂದೆ ಸರಿದಿದ್ದಾರೆ.
‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಇದೀಗ ಈ ಪ್ರಕರಣದ ತೀರ್ಪಿಗೂ ಮುನ್ನವೇ ಅಚ್ಚರಿಯ ಬೆಳವಣಿಗೆಯಲ್ಲಿ ಗುಜರಾತ್‌ ಹೈಕೋರ್ಟ್‌ ಜಡ್ಜ್‌ ಗೀತಾ ಗೋಪಿ ಕಾರಣ ತಿಳಿಸದೆ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಏ. 29ರಂದು ಪ್ರಕರಣವನ್ನು ಪರಿಗಣಿಸುವಂತೆ ರಾಹುಲ್ ಗಾಂಧಿ ಪರ ವಕೀಲ ಪಂಕಜ್ ಚಂಪನೇರಿ, ಜಡ್ಜ್‌ ಗೀತಾ ಗೋಪಿ ಅವರಿದ್ದ ಪೀಠವನ್ನು ಕೇಳಿದ್ದರು. ಆದರೆ, ಪ್ರಕರಣದ ಆಲಿಸುವಿಕೆಯ ಎರಡು ದಿನಕ್ಕೂ ಮೊದಲೇ ಗೀತಾ ಗೋಪಿ ಈ ಕೇಸ್‌ನಿಂದ ಹಿಂದೆ ಸರಿದಿದ್ದಲ್ಲದೆ ನಾನು ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ. ಈ ಪ್ರಕರಣವನ್ನು ಹೈ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಅವರಿಗೆ ನೀಡಿ. ಅಲ್ಲಿಂದ ಬೇರೆ ಪೀಠಕ್ಕೆ ಹಸ್ತಾಂತರಿಸಲಿ ಎಂದಿದ್ದಾರೆ.
ಇತ್ತ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ ಪರ ವಕೀಲ ಪಂಕಜ್‌ ಚಂಪನೇರಿ, ಗುಜರಾತ್‌ ಹೈಕೋರ್ಟ್‌ನಲ್ಲಿ ರಾಹುಲ್‌ ಗಾಂಧಿ ಅವರ ಮೇಲ್ಮನವಿಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಬೇಕಿದೆ. ಹಾಗಾಗಿ ವಿಚಾರಣೆ ಇನ್ನೂ ಎರಡು ದಿನಗಳ ಕಾಲ ತಡವಾಗಲಿದೆ ಎಂದು ತಿಳಿಸಿದ್ದಾರೆ.
2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಎಲ್ಲ ಕಳ್ಳರ ಹೆಸರುಗಳು ಮೋದಿ ಎಂದೇ ಏಕೆ ಕೊನೆಗೊಳ್ಳುತ್ತವೆ ಎಂದು ಲೇವಡಿ ಮಾಡಿದ್ದರು.ಈ ಹೇಳಿಕೆ ವಿರುದ್ಧ ಗುಜರಾತ್‌ನ ಸೂರತ್‌ನಲ್ಲಿ ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ, ರಾಹುಲ್‌ ಗಾಂಧಿ ವಿರುದ್ಧ ಕ್ರಿಮಿನಲ್‌ ಮಾನಹಾನಿ ದಾವೆ ಹೂಡಿದ್ದರು. ಸೂರತ್‌ ಕೋರ್ಟ್‌ ಇದರ ವಿಚಾರಣೆ ನಡೆಸಿ ಎರಡು ವರ್ಷ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿತ್ತು.



















































































error: Content is protected !!
Scroll to Top