ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಪಕ್ಷಾಂತರ ಪರ್ವವೂ ಹೆಚ್ಚಿದೆ. ಅಭ್ಯರ್ಥಿಗಳ ಕಾರ್ಯ ವೈಖರಿಯ ಪರಿಣಾಮವೋ, ಪ್ರಚಾರದ ಪ್ರಭಾವವೋ ಅಥವಾ ಹಿರಿಯ ನಾಯಕರ ಮನವೊಲಿಕೆಯೋ ಒಟ್ಟಿನಲ್ಲಿ ಕಾರ್ಕಳದಲ್ಲಿ ಪ್ರಮುಖರಿಂದ ಹಿಡಿದು ಸಾಮಾನ್ಯ ಜನರೂ ಪಕ್ಷಾಂತರವಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಕಾರ್ಕಳದಲ್ಲಿ ಪ್ರತಿನಿತ್ಯ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಪಕ್ಷಾಂತರವಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಮತ ಬಹಿರಂಗವಾಗುತ್ತಿದೆಯೇ..?
ಈ ಬಾರಿ ಕಾರ್ಕಳದಲ್ಲಿ ಸಾಮಾನ್ಯ ಜನತೆಯೂ ಬಹಿರಂಗವಾಗಿ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಕಂಡುಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಬಹಳ ವಿಶೇಷವಾಗಿದ್ದು, ಜನ ತಮಗೆ ಬೇಕಾದ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯತೆ ಇದಾಗಿದೆ. ಈ ಒಂದು ಹಕ್ಕನ್ನು ಗೌಪ್ಯವಾಗಿ ಚಲಾಯಿಸುವುದು ರೂಢಿ. ಆದರೆ, ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಈ ಹಕ್ಕು ಇದೀಗ ಪಕ್ಷಾಂತರದ ಮೂಲಕ ಬಹಿರಂಗವಾಗುತ್ತಿದೆಯೇ ಎಂದು ಚಿಂತಿಸುವಂತಾಗಿದೆ. ಪಕ್ಷದ ಗೆಲುವಿನ ಭರವಸೆಯೋ, ಅಭ್ಯರ್ಥಿಯ ಮೇಲಿರುವ ನಂಬಿಕೆಯೋ, ಕಾರ್ಯಕರ್ತರ ಮೇಲಿನ ವಿಶ್ವಾಸವೋ, ಒಟ್ಟಿನಲ್ಲಿ ಕಾರ್ಕಳದಲ್ಲಿ ಪಕ್ಷಾಂತರ ಮತ್ತು ಪಕ್ಷ ಸೇರ್ಪಡೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ತಾವು ಸೇರ್ಪಡೆಗೊಂಡ ಪಕ್ಷ ಗೆಲುವು ಸಾಧಿಸಿದಲ್ಲಿ ಮುಂದೆ ತಮ್ಮ ಬೇಡಿಕೆಗಳು ಈಡೇರಬಹುದು. ಇಲ್ಲದಿದ್ದಲ್ಲಿ ಪಕ್ಷಾಂತರ, ಪಕ್ಷ ಸೇರ್ಪಡೆ ಅಥವಾ ಇಂದು ಮಾಡಿದ ಬಹಿರಂಗ ಪ್ರಚಾರ ಮುಂದೊಂದು ದಿನ ಸಮಸ್ಯೆಗೆ ದಾರಿಯಾಗಬಹುದು ಎಂದು ಕೆಲವರ ಅಭಿಪ್ರಾಯ. ಕಾರ್ಕಳದಲ್ಲಿ ಮನೆ ಮನೆಯಲ್ಲೂ ಚುನಾವಣೆಯ ಕಳೆ ಕಾಣುತ್ತಿದೆ. ಬಸ್‌ಸ್ಟ್ಯಾಂಡ್, ಮಾರ್ಕೆಟ್, ರಸ್ತೆ ಬದಿ ಹೀಗೆ ಎಲ್ಲೆಂದರಲ್ಲೂ ಜನರ ಬಾಯಲ್ಲಿ ಚುನಾವಣೆಯದ್ದೇ ಮಾತು, ಚರ್ಚೆ. ಅವರವರ ನಡುವೆ ಈ ಬಾರಿ ಅವರು ಬರಬಹುದು, ಇವರು ಬರಬಹುದು ಎಂಬ ಮಾತುಗಳು, ಸಣ್ಣ ಮಟ್ಟದ ವಾದ ವಿವಾದಗಳು, ಹರಟೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಇತ್ತಂಡಗಳ ನಡುವಿನ ಪೈಪೋಟಿಯಲ್ಲಿ ಸಾಮಾನ್ಯ ಜನತೆಯೂ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿರುವುದು ಚುನಾವಣಾ ಅಖಾಡದಲ್ಲಿ ಎರಡು ಪಕ್ಷಗಳಿಗೆ ಬಲ ನೀಡಿದಂತಾಗಿದೆ.

ವರದಿ : ನಳಿನಿ ಎಸ್. ಸುವರ್ಣ
























