ರ‍್ಯಾಪಿಡೊ ಸವಾರನಿಂದ ಕಿರುಕುಳ : ಬೈಕ್‌ನಿಂದ ಜಿಗಿದ ಯುವತಿ

ಬೆಂಗಳೂರು: ಲೈಂಗಿಕ ಕಿರುಕುಳ ನೀಡುತ್ತಿದ್ದ ರ‍್ಯಾಪಿಡೊ ಚಾಲಕನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಇಂದಿರಾನಗರದಲ್ಲಿ ಈ ಘಟನೆ ನಡೆದಿದ್ದು, ಆರ್ಕಿಟೆಕ್ಚರ್‌ ಆಗಿರುವ 30 ವರ್ಷದ ಯುವತಿ ಏ. 21ರಂದು ರಾತ್ರಿ 11.30ರ ಹೊತ್ತಿಗೆ ಮನೆಗೆ ಹೋಗಲು ಆನ್‌ಲೈನ್‌ ಆ್ಯಪ್ ಮೂಲಕ ರ‍್ಯಾಪಿಡೊ ಬೈಕ್ ಬುಕ್‌ ಮಾಡಿದ್ದರು. ನಿಗದಿತ ಸ್ಥಳಕ್ಕೆ ಬಂದ ರ‍್ಯಾಪಿಡೊ ಬೈಕ್‌ ಚಾಲಕ ಯುವತಿಯನ್ನು ಹತ್ತಿಸಿಕೊಂಡಿದ್ದು, ಅಲ್ಲಿಂದ ಇಂದಿರಾನಗರಕ್ಕೆ ಬೈಕ್‌ ತೆರಳಬೇಕಿತ್ತು. ಆದರೆ ಆತ ಅಲ್ಲಿಗೆ ಕರೆದೊಯ್ಯದೆ ಒಟಿಪಿ ಪರಿಶೀಲಿಸುವ ನೆಪದಲ್ಲಿ ಆಕೆಯ ಫೋನ್ ತೆಗೆದುಕೊಂಡು ದೊಡ್ಡಬಳ್ಳಾಪುರಕ್ಕೆ ಹೋಗಲು ಯತ್ನಿಸಿದ್ದಾನೆ.
ಬೈಕ್‌ ನಿಗದಿತ ಸ್ಥಳಕ್ಕೆ ಹೋಗದೆ ಇರುವುದನ್ನು ಗಮನಿಸಿದ ಯುವತಿ ಕೂಡಲೇ ಚಾಲಕನನ್ನು ಪ್ರಶ್ನಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ಉತ್ತರಿಸದ ಆತ ಬೈಕ್‌ ವೇಗವನ್ನು ಹೆಚ್ಚಿಸಲು ಮುಂದಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಕೂಡಲೇ ಆತನ ಬಳಿಯಿದ್ದ ತನ್ನ ಫೋನ್‌ನನ್ನು ಕಸಿದುಕೊಂಡು, ಗಾಡಿ ನಿಲ್ಲಿಸುವಂತೆ ಹೇಳಿದ್ದಾಳೆ. ಪಾನಮತ್ತನಾಗಿದ್ದ ಆ ಚಾಲಕ ಗಾಡಿ ನಿಲ್ಲಿಸದೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಆತನಿಂದ ರಕ್ಷಿಸಿಕೊಳ್ಳಲು ಬಿಎಂಎಸ್‌ ಕಾಲೇಜು ಸಮೀಪ ಚಲಿಸುತ್ತಿದ್ದಾಗಲೇ ರಾಪಿಡೊ ಬೈಕಿನಿಂದ ಜಿಗಿದಿದ್ದಾರೆ. ಬಳಿಕ ಯುವತಿ ಪೊಲೀಸರಿಗೆ ಮತ್ತು ರ‍್ಯಾಪಿಡೋ ಸಂಸ್ಥೆಗೂ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



















































error: Content is protected !!
Scroll to Top