ಬದುಕು ಕೃತಜ್ಞತೆಯೇ ಹೊರತು ಹಕ್ಕಲ್ಲ – ಎಸ್. ಎನ್. ಸೇತುರಾಮ್

ವಿದ್ಯಾಗಿರಿ : ಬದುಕು ಕೃತಜ್ಞತೆಯೇ ಹೊರತು ಹಕ್ಕಲ್ಲ ಎಂದು ಸಾಹಿತಿ, ಚಿತ್ರಕಥೆಗಾರ, ನಿರ್ದೇಶಕ ಎಸ್. ಎನ್. ಸೇತುರಾಮ್ ಹೇಳಿದರು. ಅವರು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಚಿಂತನ- ಮಂಥನ ಮತ್ತು ರೀಡರ್ಸ್ ಕ್ಲಬ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆ ಮತ್ತು ಸಾಮಾಜಿಕ ಪ್ರಜ್ಞೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಹಳೆಯ ಮತ್ತು ಇಂದಿನ ತಲೆಮಾರುಗಳ ಆಲೋಚನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹಳೆತಲೆಮಾರಿನವರು ಜೀವನವನ್ನು ಜವಾಬ್ದಾರಿ ಹಾಗೂ ಕೃತಜ್ಞತೆಯಿಂದ ಕಂಡರೆ, ಹೊಸ ತಲೆಮಾರಿನವರು ಬದುಕನ್ನು ಹಕ್ಕು ಎಂದು ಭಾವಿಸಿದ್ದಾರೆ ಎಂದರು. ಯುವಜನತೆ ಸಮಾಜಕ್ಕೆ ನೀಡುವ ಕೊಡುಗೆಯೇ ಅವರ ಸಾಧನೆ. ಈ ದೇಶದಲ್ಲಿರುವಷ್ಟು ಪ್ರಜ್ಞೆ, ಭಾಷೆ, ಧರ್ಮ, ಹಬ್ಬಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಭಾರತೀಯರಾದ ನಮಗೆ ಹಿಂಜರಿಕೆ ಬೇಡ ಎಂದರು. ದೇಶದಲ್ಲಿ ಸಂಪತ್ತು ಹೇರಳವಾಗಿದ್ದರಿಂದ ಭಾರತವು ಬೇರೆ ದೇಶದ ಮೇಲೆ ದಂಡೆತ್ತಿ ಹೋಗಿರಲಿಲ್ಲ. ಆದರೆ ಇತರ ದೇಶಗಳು ಆಕ್ರಮಣಗಳ ಮೂಲಕ ಭಾರತೀಯರನ್ನು ನೆಮ್ಮದಿಯಾಗಿ ಬದುಕಲು ಬಿಡಲಿಲ್ಲ. ದೇಶದಲ್ಲಿರುವ ಗುಲಾಮಗಿರಿಯ ಮನಸ್ಥಿತಿಯನ್ನು ಹೋಗಲಾಡಿಸ ಬೇಕಾಗಿದೆ ಎಂದರು. ನಾವು ಬೇರೆ ದೇಶದ ಆವಿಷ್ಕಾರವನ್ನು ನಂಬುತ್ತೇವೆ. ನಮ್ಮ ದೇಶದ ಆವಿಷ್ಕಾರವನ್ನು ನಂಬುವುದಿಲ್ಲ. ಸುಖ- ಸಂತೋಷ ಆಂತರ್ಯದಿಂದ ಬರಬೇಕೆ ಹೊರತು, ಬಾಹ್ಯದಿಂದಲ್ಲ. ರಾಷ್ಟ್ರೀಯತೆ ಜೊತೆ ಸಾಮಾಜಿಕ ಪ್ರಜ್ಞೆಯಿದ್ದರೆ ದೇಶವನ್ನು ಅದ್ಭುತವಾಗಿ ಕಟ್ಟಬಹುದು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ದೇಶಪ್ರೇಮ ಎಂದರೆ ಕೇವಲ ಬಾವುಟ ಹಾಗೂ ಜೈಕಾರಕ್ಕೆ ಸೀಮಿತವಲ್ಲ. ಯಾವುದೇ ಆಸೆ-ಆಕಾಂಕ್ಷೆಗಳಿಗೆ ಬಲಿಪಶು ಆಗದೇ, ವಿಷಯದ ಆಳಜ್ಞಾನ ಹೊಂದಬೇಕು ಎಂದು ಸಲಹೆ ನೀಡಿದರು. ಕಾರ‍್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಚಿಂತನ-ಮಂಥನ ಮತ್ತು ರೀಡರ್ಸ್ ಕ್ಲಬ್‌ನ ಸಂಯೋಜಕ ಶಶಿಕುಮಾರ್ ಹಾಗೂ ಶ್ವೇತಾ ಇದ್ದರು. ಉಪನ್ಯಾಸಕ ಮನೋಜ್ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಿಯ ವಂದಿಸಿದರು.

















































error: Content is protected !!
Scroll to Top