ಕಾರ್ಕಳದಲ್ಲಿ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರ
ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಎ. 22ರಿಂದ 30ರ ವರೆಗೆ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಚಿಣ್ಣರ ಮೇಳ ನಡೆಯಲಿದೆ. ಎ. 22ರಂದು ಬೆಳಿಗ್ಗೆ 9.30 ಗಂಟೆಗೆ ಮಕ್ಕಳೇ ವಿಭಿನ್ನ ರೀತಿಯಲ್ಲಿ ಚಿಣ್ಣರ ಮೇಳ ಉದ್ಘಾಟಿಸಲಿದ್ದಾರೆ.
ಕಳೆದ ವರ್ಷದ ಚಿಣ್ಣರ ಮೇಳದಲ್ಲಿ 236 ಮಕ್ಕಳು ಭಾಗವಹಿಸಿದ್ದು, ಈ ವರ್ಷ 7 ರಿಂದ 15 ವರ್ಷದೊಳಗಿನ ಒಟ್ಟು 440 ಮಕ್ಕಳು ನೋಂದಾವಣೆ ಮಾಡಿಕೊಂಡಿದ್ದಾರೆ.
ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಹಾಕಿರುವ ನಾಲ್ಕು ವೇದಿಕೆಗಳಲ್ಲಿ ರಾಜ್ಯದ ಪ್ರತಿಭಾನ್ವಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕಲಾಪ್ರಕಾರದ ಚಟುವಟಿಕೆಗಳು ನಡೆಯಲಿವೆ. ಶಿಬಿರದಲ್ಲಿ ರಂಗಾಭಿನಯ, ರಂಗಗೀತೆ, ಮಾತುಗಾರಿಕೆ, ಚಿತ್ರಕಲೆ, ಕೊಲಾಜ್, ಕ್ಲೇ ಮಾಡಲಿಂಗ್, ಮುಖವರ್ಣಿಕೆ, ಚಲನಚಿತ್ರ ಪ್ರದರ್ಶನ, ಪಕ್ಷಿಲೋಕ, ರಂಗದಾಟಗಳು, ಕಥಾಭಿನಯ, ಅಭಿನಯ ಗೀತೆ, ಕತೆ ಕಟ್ಟುವ ರೀತಿ, ಗುಂಪು ಚಟುವಟಿಕೆಗಳು, ಮುಖವಾಡ ತಯಾರಿ, ಕ್ರಾಫ್ಟ್, ನಾಟಕ ತಯಾರಿ ಮತ್ತು ಪ್ರದರ್ಶನ ಅಲ್ಲದೆ ಮಕ್ಕಳ ಬದುಕಿಗೆ ಬೇಕಾದ ಮೌಲ್ಯಯುತ ವಿಚಾರಗಳು ಸೇರಿದಂತೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತಾರು ವಿಷಯಗಳನ್ನು ತರಬೇತಿ ನೀಡಲಾಗುತ್ತದೆ.
ಡಾ. ಜೀವನ್ ರಾಂ ಸುಳ್ಯ ಶಿಬಿರದ ನಿರ್ದೇಶಕರಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಚಂದ್ರಶೇಖರ ಹೆಗ್ಗೊಟಾರ ಮೈಸೂರು, ಸಂಗೀತ ಭಿಡೆ ಧರ್ಮಸ್ಥಳ, ಜನಾರ್ಧನ ಹಾವಂಜೆ, ಅಕ್ಷಯ್ ಪಲಿಮಾರ್, ಹರೀಶ್ ಅರಸೀಕೆರೆ, ಚಂದ್ರನಾಥ ಬಜಗೋಳಿ, ಶಿವಗಿರಿ ಕಲ್ಲಡ್ಕ, ಶ್ರೀಮತಿ ದಿವ್ಯಾ ಅರ್ಜುನ್ ಕಾರ್ಕಳ, ಝುಬೇರ್ ಖಾನ್ ಕುಡ್ಲ, ಸೂರ್ಯ ಪುರೋಹಿತ್ ಕಾರ್ಕಳ, ತಾರಾನಾಥ ಕೈರಂಗಳ, ಸುಶ್ಮಿತಾ ಮೋಹನ್, ಸಂತೋಷ್ ಮಾಳ, ಶ್ರೇಷ್ಠ ಕಾರ್ಕಳ , ಭಾಸ್ಕರ ನೆಲ್ಯಾಡಿ, ಭಾವನಾ ಕೆರೆಮಠ, ವಿ.ಕೆ. ವಿಟ್ಲ, ಉಜ್ವಲ್ ಮಂಗಳೂರು, ಭುವನ್ ಮಣಿಪಾಲ, ಜೋಶಿತ್ ಶೆಟ್ಟಿ ಬಳಗ ಮುಂತಾದವರು ಭಾಗವಹಿಸಲಿದ್ದಾರೆ. ಶಿಬಿರವು ಎ. 30 ರಂದು ಮಕ್ಕಳ ಪ್ರತಿಭಾ ಪ್ರದರ್ಶದೊಂದಿಗೆ ಸಮಾಪನಗೊಳ್ಳಲಿದೆ ಎಂದು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ತಿಳಿಸಿದ್ದಾರೆ.










































