ಕಾರ್ಕಳ : ಹೆರಿಗೆ ವೇಳೆ ಮಗು ಸಾವನ್ನಪ್ಪಿದ ಘಟನೆ ಕುರಿತಂತೆ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತುಂಬು ಗರ್ಭೀಣಿ, ಸಾಣೂರು ಮಠದಕೆರೆ ಕೆಂಚಬೆಟ್ಟುವಿನ ಸುಬೀತಾ ಮಾ. 17ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ವೈದ್ಯರಿಲ್ಲದ ಕಾರಣ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಹೋಗುವಂತೆ ದಾದಿಯರು ತಿಳಿಸಿರುತ್ತಾರೆ. ಕೂಡಲೇ ಸುಬಿತಾ ಅವರನ್ನು ಮನೆಯವರು ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ದೃಢಪಡಿಸಿರುತ್ತಾರೆ.
ಗರ್ಭಿಣಿ ಸುಬೀತಾ ಅವರು ನಿಯಮಿತ ಚೆಕ್ಅಪ್ಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದರು. ಅಲ್ಲಿ ಹೆರಿಗೆ ತಜ್ಞೆ ಡಾ. ನಾಗರತ್ನ ತಪಾಸಣೆ ನಡೆಸುತ್ತಿದ್ದರು. ಡಾ. ನಾಗರತ್ನ ಅವರ ಮಗಳು ಡಾ. ಸ್ಪಂದನಾ ಕೂಡ ಇದೇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುಬೀತಾ ಅವರನ್ನು ಇವರೂ ಕೆಲವೊಮ್ಮೆ ತಪಾಸಣೆ ಮಾಡುತ್ತಿದ್ದರು. ಸ್ಕ್ಯಾನಿಂಗ್ ವರದಿಯಂತೆ ಗರ್ಭದಲ್ಲಿರುವ ಮಗು ಸಹಜ ತೂಕಕ್ಕಿಂತ ಹೆಚ್ಚಿದ್ದು (2.900), ಮಗು ಈಗ ಆರೋಗ್ಯಯುತವಾಗಿದೆ. ಆದರೂ, ಆಬ್ಸರ್ವೇಷನ್ನಲ್ಲಿರುವುದು ಅವಶ್ಯ ಎಂದು ತಿಳಿಸಿರುತ್ತಾರೆ.
ವೈದ್ಯೆ ಡಾ. ನಾಗರತ್ನ – ಡಾ. ಸ್ಪಂದನಾ ಸುಬೀತಾ ಅವರಲ್ಲಿ ಮಾ. 20ಕ್ಕೆ ಹೆರಿಗೆಯ ದಿನಾಂಕವೆಂದು ಹೇಳಿರುತ್ತಾರೆ. ಮಗುವಿನ ತೂಕದ ಹೆಚ್ಚಳದ ಬಗ್ಗೆ ತಿಳಿದ ಸುಬೀತಾ ಅವರ ಮನೆಯವರು ಮಗುವಿನ ಗಾತ್ರ ದೊಡ್ಡದಿದ್ದರೆ ಹೆಚ್ಚಿನ ಚಿಕಿತ್ಸೆ ಅಥವಾ ಸಿಸೇರಿಯನ್ ಹೆರಿಗೆ ಮಾಡುವುದಾದರೆ ಮಾಡಿಸಿ ಎಂದು ಹೆರಿಗೆ ತಜ್ಞರಲ್ಲಿ ಕೇಳಿಕೊಂಡಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಹೆರಿಗೆ ಬೇನೆ ಬಂದರೆ ಮಾತ್ರ ಆಸ್ಪತ್ರೆಗೆ ಬನ್ನಿ ಎಂದು ವೈದ್ಯರು ಅವರಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಮಾ. 17 ರಂದು ಸುಬೀತಾ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ರಾತ್ರಿ 8 ಗಂಟೆಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದಿರುತ್ತಾರೆ. ಆದರೆ ಅಲ್ಲಿ ಆ ಸಂದರ್ಭ ಹೆರಿಗೆಯ ವೈದ್ಯರು ಇಲ್ಲ ಎಂಬ ಕಾರಣಕ್ಕಾಗಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ತುರ್ತಾಗಿ ಹೋಗುವಂತೆ ದಾದಿಯರು ಸೂಚಿಸಿದ್ದಾರೆ. ಲೇಡಿಗೋಷನ್ ಆಸ್ಪತ್ರೆಗೆ ದಾಖಲಾದ ಸುಬೀತಾ ಅವರಿಗೆ ಅಲ್ಲಿ ಸಹಜ ಹೆರಿಗೆ ಮಾಡಲಾಯಿತಾದರೂ ಮಗು ಗರ್ಭದಲ್ಲೇ ಮೃತಪಟ್ಟಿದೆ. ಎರಡು ಗಂಟೆ ಮುಂಚಿತವಾಗಿ ಬಂದಿದ್ದರೆ ಮಗುವನ್ನು ಬದುಕಿಸಬಹುದಿತ್ತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

ಕಾರ್ಕಳ ಆಸ್ಪತ್ರೆಯಲ್ಲಿ ತಪಾಸಣೆಯ ಸಂದರ್ಭ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯ ಸರಿಯಾದ ಮಾಹಿತಿ ನೀಡದೆ ಇರುವುದು ಮತ್ತು ಹೆರಿಗೆ ನೋವಿನ ಸಂದರ್ಭ ಇಲ್ಲಿ ವೈದ್ಯರು ಸಿಗದೆ ಇದ್ದ ಕಾರಣ ಮಗು ಸಾವನಪ್ಪುವಂತಾಗಿದೆ ಎಂದು ಸುಬೀತಾ ಅವರ ತಾಯಿ ಆಶಾ ಆರೋಪಿಸಿದ್ದಾರೆ. ಮಗು ಮೃತಪಟ್ಟ ಪ್ರಕರಣದ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಕೆ. ಸುಬ್ರಮಣ್ಯ ರಾವ್ ಅವರನ್ನು ವಿಚಾರಿಸಿದಾಗ ಈ ಘಟನೆಯ ಕುರಿತು ತನಗೆ ಮಾಹಿತಿಯೇ ಇಲ್ಲವೆಂದು ತೀರಾ ನಿರ್ಲಕ್ಷ್ಯತನದಿಂದ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಆಶಾ ಸಿಟ್ಟು ಹೊರಹಾಕಿದ್ದಾರೆ.
ಸ್ಥಳೀಯರ ದೂರಿನ ಆಧಾರದ ಮೇರೆಗೆ ಪ್ರಾಥಮಿಕ ತನಿಖೆ ನಡೆಸುವಂತೆ ಡಿಎಚ್ಓ ಡಾ. ನಾಗಭೂಷಣ್ ಉಡುಪ ಅವರು ಆದೇಶ ಹೊರಡಿಸಿರುತ್ತಾರೆ. ಅದರಂತೆ ತನಿಖೆ ನಡೆಸುತ್ತಿದ್ದೇವೆ. ಅಲ್ಲದೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಕೆ. ಸುಬ್ರಮಣ್ಯ ರಾವ್ ಹಾಗೂ ಸುಬೀತಾ ಮತ್ತು ಅವರ ಮನೆಯವರನ್ನು ತನಿಖೆಗೆ ಒಳಪಡಿಸಲಾಗುತ್ತದೆ.
ಡಾ. ಕೃಷ್ಣಾನಂದ ಶೆಟ್ಟಿ
ತಾಲೂಕು ಆರೋಗ್ಯಾಧಿಕಾರಿ
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸಕಲ ಸೌಕರ್ಯವಿದ್ದಾಗ್ಯೂ ಕೆಲವೊಂದು ವೈದ್ಯರ ಉದಾಸೀನ, ಕರ್ತವ್ಯ ಲೋಪದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾಮಾನ್ಯ ಬಡ ಜನತೆ ಇಲ್ಲಿಗೆ ತಪಾಸಣೆ ಬರಲು ಭಯಪಡುವಂತಾಗಿದೆ. ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ತಜ್ಞ ವೈದ್ಯರನ್ನು ಇಲ್ಲಿಂದ ರಾತ್ರೋ ರಾತ್ರಿ ವರ್ಗಾವಣೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಸರಕಾರಿ ಆಸ್ಪತ್ರೆಯನ್ನು ಮುಚ್ಚುವುದೇ ಉತ್ತಮ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಡಾ. ಗಣೇಶ್ ಭಟ್ ಅವರು ಹೆರಿಗೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಉತ್ತಮ ಸೇವೆ ನೀಡುತ್ತಿದ್ದರು. ಜನಸೇವೆಯನ್ನೇ ಧ್ಯೇಯವಾಗಿರಿಸಿಕೊಂಡಿದ್ದ ಅವರನ್ನು ವರ್ಗಾವಣೆಗೊಳಿಸಿರುವುದು ಸರಿಯಲ್ಲ. ಸಕಲ ವ್ಯವಸ್ಥೆಯಿದ್ದಾಗ್ಯೂ ಇಲ್ಲಿನ ವೈದ್ಯಾಧಿಕಾರಿ ಡಾ. ಕೆ.ಎಸ್. ರಾವ್ ಅವರಿಂದಾಗಿ ಇಲ್ಲಿನ ಆಸ್ಪತ್ರೆಗೆ ತೊಂದರೆಯಾಗಿದೆ. ಡಾ. ಕೆ.ಎಸ್. ರಾವ್ ಮತ್ತವರ ಕುಟುಂಬಕ್ಕಾಗಿ ಬಡ ಜನರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು. ಬೆಳಕಿಗೆ ಬಾರದ ಅದೆಷ್ಟೋ ಘಟನೆಗಳು ಇಲ್ಲಿ ನಡೆದಿದ್ದು, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಉನ್ನತಾಧಿಕಾರಿಗಳು ಈ ಕುರಿತು ಗಮನ ಹರಿಸಬೇಕು.
ಸುಜಿತ್ ಎ. ಕುಂದರ್
ಸಾಮಾಜಿಕ ಕಾರ್ಯಕರ್ತ

























