ಹೆಬ್ರಿ : ತಾಲೂಕು ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಮನೆ ಮಾಡಿರುವಂತಹ ಕುಟುಂಬದ ಕುರಿತು ಕಂದಾಯ ಇಲಾಖೆಯಿಂದ ಪರಿಶೀಲನೆ ನಡೆಸಿ, ಡೀಮ್ಡ್ ಫಾರೆಸ್ಟ್ ಸಂಬಂಧಿತ ಸಮಸ್ಯೆಯನ್ನು ಬಿಜೆಪಿ ಸರಕಾರ ಪರಿಹರಿಸಿದ ಪರಿಣಾಮ ಇದೀಗ ಹಕ್ಕುಪತ್ರ ನೀಡುವಂತಾಗಿದೆ ಎಂದು ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಮಾ. 20 ರಂದು ಹೆಬ್ರಿ ತಾಲೂಕು ಆಡಳಿತ ಸೌಧದಲ್ಲಿ 94ಸಿಯ 49 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಹಕ್ಕುಪತ್ರ ಪಡೆದ ಫಲಾನುಭವಿಗಳು ಮನೆ ನಿರ್ಮಾಣಕ್ಕಾಗಿ ಪಂಚಾಯತ್ ಮೂಲಕ ಸರಕಾರದ ಅನುದಾನ ಪಡೆಯಬಹುದಾಗಿದೆ. ಬ್ಯಾಂಕ್‌ನಿಂದ ಸಾಲ ಪಡೆಯಬಹುದಾಗಿದೆ. ಕಳೆದ 6 ತಿಂಗಳಲ್ಲಿ ಕಾರ್ಕಳ- ಹೆಬ್ರಿಯ 34 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ವಿವಿಧ ಸವಲತ್ತು ವಿತರಣೆ
ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರ ಕೆಲಸಕ್ಕೆ ಸಂಬಂಧಿಸಿದ ಸಲಕರಣೆಗಳನ್ನೊಳಗೊಂಡ ಕಿಟ್ ಮತ್ತು ಆರೋಗ್ಯ ಇಲಾಖೆಯಿಂದ ಸೊಳ್ಳೆ ಪರದೆಯನ್ನು ವಿತರಿಸಲಾಯಿತು. ಇದೇ ಸಂದರ್ಭ ಮಾ. 3 ರಂದು ಮುದ್ರಾಡಿಯಲ್ಲಿ ಹಕ್ಕು ಪತ್ರ ದೊರೆತ 100 ಮಂದಿ ಫಲಾನುಭವಿಗಳಿಗೆ ಆರ್‌ಟಿಸಿಯನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಹೆಬ್ರಿ ಗ್ರಾ. ಪಂ. ಅಧ್ಯಕ್ಷೆ ಮಾಲತಿ, ಚಾರ ಗ್ರಾ. ಪಂ. ಅಧ್ಯಕ್ಷೆ ಕುಸುಮ ಪ್ರಭು, ಶಿವಪುರ ಗ್ರಾ. ಪಂ. ಅಧ್ಯಕ್ಷ ಶೇಖರ್ ಶೆಟ್ಟಿ, ಕುಚ್ಚೂರು ಗ್ರಾ. ಪಂ. ಅಧ್ಯಕ್ಷೆ ರೇವತಿ ಶೆಟ್ಟಿ, ವರಂಗ ಗ್ರಾ. ಪಂ. ಅಧ್ಯಕ್ಷೆ ಉಷಾ ಹೆಬ್ಬಾರ್, ಕಂದಾಯ ನಿರೀಕ್ಷಕ ಹಿತೇಶ್ ಮೊದಲಾದವರು ಉಪಸ್ಥಿತರಿದ್ದರು. ಅನುಷಾ ಪ್ರಾರ್ಥಿಸಿದರು. ತಹಶೀಲ್ದಾರ್ ಪುರಂದರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.















































