ತನಿಖಾ ಸಂಸ್ಥೆಗಳ ದುರ್ಬಳಕೆ : 8 ಪ್ರತಿಪಕ್ಷಗಳಿಂದ ಪ್ರಧಾನಿ ಮೋದಿಗೆ ಪತ್ರ

ವಿಪಕ್ಷಗಳ ನಿರ್ಧಾರದಿಂದ ಹೊರಗುಳಿದ ಕಾಂಗ್ರೆಸ್‌

ದೆಹಲಿ : ವಿಪಕ್ಷ ನಾಯಕರನ್ನು ಮಟ್ಟ ಹಾಕಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ, ಎಂಟು ವಿರೋಧ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಆದರೆ, ಈ ಪತ್ರದಲ್ಲಿ ಕಾಂಗ್ರೆಸ್‌ ಮಾತ್ರ ಈ ಪತ್ರದಲ್ಲಿ ಹೊರಗುಳಿದಿರುವುದು ಕುತೂಹಲ ಕೆರಳುವಂತೆ ಮಾಡಿದೆ. ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರ ಬಂಧನದಿಂದ ಉಂಟಾಗಿರುವ ರಾಜಕೀಯ ಸಮರದ ನಡುವೆ ಈ ಪತ್ರ ಬರೆಯಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಹಿ ಹಾಕಿದ ಮುಖ್ಯಮಂತ್ರಿಗಳಲ್ಲಿ ಸೇರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾದ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಬಿಹಾರ ಡಿಸಿಎಂ ತೇಜಸ್ವಿ ಯಾದವ್ ರುಜು ಹಾಕಿದ ಇತರೆ ನಾಯಕರು.
ಭಾರತ ಈಗಲೂ ಪ್ರಜಾಪ್ರಭುತ್ವ ದೇಶ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ ಎಂದು ಆಶಿಸುತ್ತೇವೆ. ವಿರೋಧಪಕ್ಷಗಳ ಸದಸ್ಯರ ವಿರುದ್ಧ ಕೇಂದ್ರ ಸಂಸ್ಥೆಗಳ ಅತಿಯಾದ ದುರ್ಬಳಕೆಯು, ನಾವು ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರಕ್ಕೆ ಪರಿವರ್ತನೆ ಹೊಂದಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಸುದೀರ್ಘ ಕುತಂತ್ರಗಳ ಬಳಿಕ ಮನೀಶ್ ಸಿಸೋಡಿಯಾ ಅವರನ್ನು, ಯಾವುದೇ ಪುರಾವೆ ಇಲ್ಲದೆಯೂ ಅಕ್ರಮಗಳ ಆರೋಪದಲ್ಲಿ ಸಿಬಿಐ ಬಂಧಿಸಿದೆ ಎಂದು ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದ ಬಂಧನವನ್ನು ಪತ್ರದಲ್ಲಿ ಖಂಡಿಸಲಾಗಿದೆ.

2014ರಿಂದ ನಿಮ್ಮ ಆಡಳಿತದ ಅಡಿಯಲ್ಲಿ ತನಿಖಾ ಸಂಸ್ಥೆಗಳು ಪ್ರಮುಖ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ, ದಾಳಿ ಮಾಡಿದ ಅಥವಾ ವಿಚಾರಣೆಗೆ ಒಳಪಡಿಸಿದ ಅನೇಕ ಘಟನೆಗಳಲ್ಲಿ, ಹೆಚ್ಚಿನವರು ವಿರೋಧ ಪಕ್ಷಗಳಿಗೆ ಸೇರಿದವರಾಗಿದ್ದಾರೆ. ಆಸಕ್ತಿಕರವೆಂದರೆ, ಬಿಜೆಪಿ ಸೇರ್ಪಡೆಯಾದ ವಿರೋಧ ಪಕ್ಷಗಳ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ತನಿಖೆಯನ್ನು ತನಿಖಾ ಸಂಸ್ಥೆಗಳು ನಿಧಾನಗೊಳಿಸಿವೆ ಎಂದು ವಿಪಕ್ಷಗಳ ಪತ್ರದಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ನಲ್ಲಿದ್ದ ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಬಿಜೆಪಿ ಸೇರ್ಪಡೆಗೊಂಡ ಬಳಿಕ, ಅವರ ವಿರುದ್ಧ ಕೇಳಿಬಂದಿದ್ದ ಶಾರದಾ ಚಿಟ್‌ ಫಂಡ್‌ ಹಗರಣ ಪ್ರಕರಣ ಮೂಲೆಗೆ ಸೇರಿತು. ಅದೇ ರೀತಿ ಪಶ್ಚಿಮ ಬಂಗಾಳದ ಮಾಜಿ ಟಿಂಎಸಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕೇಳಿಬಂದಿದ್ದ ನಾರದ ಕುಟುಕು ಕಾರ್ಯಾಚರಣೆ ಪ್ರಕರಣ ಕೂಡ, ಅವರು ಬಿಜೆಪಿ ಸೇರಿದ ಬಳಿಕ ಹಳ್ಳ ಹಿಡಿಯಿತು. ಇದು ತನಿಖಾ ಸಂಸ್ಥೆಗಳ ಪಕ್ಷಪಾತ ವರ್ತನೆಯನ್ನು ತೋರಿಸುತ್ತದೆ..ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

2014ರಿಂದ ಪ್ರತಿಪಕ್ಷ ನಾಯಕರ ವಿರುದ್ಧ ನಡೆದ ದಾಳಿಗಳು, ಪ್ರಕರಣಗಳು ಮತ್ತು ಬಂಧನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಲಾಲು ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಸಂಜಯ್ ರಾವತ್ (ಶಿವಸೇನೆ), ಆಜಂ ಖಾನ್ (ಸಮಾಜವಾದಿ ಪಕ್ಷ) ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ) ವಿರುದ್ಧದ ಪ್ರಕರಣಗಳು ಇದಕ್ಕೆ ಉದಾಹರಣೆಯಾಗಿ ಕೊಡಬಹುದು..” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಪಕ್ಷ ನಾಯಕರ ವಿರುದ್ಧದ ಈ ದಾಳಿಗಳು ರಾಜಕೀಯ ಪ್ರೇರಿತವಾಗಿದ್ದು, ಚುನಾವಣೆ ಹೊಂದಿಕೆ ರಾಜಕಾರಣಕ್ಕೆ ಸಹಕರಿಸುತ್ತಿವೆ ಎಂದು ಈ ಎಂಟು ರಾಜಕೀಯ ಪಕ್ಷಗಳು ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಕುತೂಹಲಕಾರಿ ವಿಚಾರವೆಂದರೆ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುವ ವಿಪಕ್ಷಗಳ ನಿರ್ಧಾರದಿಂದ ಕಾಂಗ್ರೆಸ್‌ ಹೊರಗುಳಿದಿರುವುದು ಕಂಡು ಬಂದಿದೆ.









































































error: Content is protected !!
Scroll to Top