ಮೂಲ ಬೇಡಿಕೆಯನ್ನು ಕೈಬಿಟ್ಟಂತಾಗಿದೆ ಎಂಬ ಅಸಮಾಧಾನ
ಬೆಂಗಳೂರು: ಸರ್ಕಾರ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಿ ಆದೇಶ ಹೊರಡಿಸುತ್ತಿದ್ದಂತೆ ಅದಕ್ಕೆ ಒಪ್ಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡ ರಾಜ್ಯ ಸರ್ಕಾರಿ ನೌಕರರ ಸಂಘದ ನಡೆಗೆ ಸಂಘದೊಳಗಿಂದಲೇ ಅಪಸ್ವರ ವ್ಯಕ್ತವಾಗಿದೆ. ಬರೀ ವೇತನ ಏರಿಕೆಯನ್ನು ಒಪ್ಪಿಕೊಂಡು ಮುಷ್ಕರ ಹಿಂದೆಗೆದುಕೊಂಡ ಪರಿಣಾಮವಾಗಿ ತಪ್ಪು ಸಂದೇಶ ಹೋದಂತಾಗಿದೆ. ಅಲ್ಲದೆ ಮುಷ್ಕರ ಆರಂಬವಾಗಿ ಮಧ್ಯಾಹನದೊಳಗೆ ಮುಗಿದು ಹೋಗಿರುವುದರಿಂದ ಸಾರ್ವಜನಿಕೆ ದೃಷ್ಟಿಯಿಂದಲೂ ಹಗುರವಾದಂತಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವಿಧಾನಸೌಧದ ಸಚಿವಾಲಯ ಸಿಬ್ಬಂದಿ ಕೂಡ ಸಂಘದ ನಡೆಯನ್ನು ವಿರೋಧಿಸಿದ್ದಾರೆ. ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಬಹಳ ಆತುರವಾಗಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡ ನಿರ್ಧಾರಕ್ಕೆ ಬಂದಿಲ್ಲ. ಸರ್ಕಾರದ ಮುಂದೆ ಸರಿಯಾದ ವಾದ ಮುಂದಿಡುತ್ತಿದ್ದರೆ ಶೇ.25ರವರೆಗೆ ವೇತನ ಹೆಚ್ಚಿಸಲು ಮುಂದಾಗುತ್ತಿತ್ತು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.
ನಾವು ಈ ಆದೇಶವನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಿ ನೌಕರರು ನೂರಕ್ಕೆ ನೂರರಷ್ಟು ಮೋಸಹೋಗಿದ್ದೇವೆ. ಶೇ.17ರಷ್ಟು ಮಧ್ಯಂತರ ವೇತನ ಹೆಚ್ಚಳವನ್ನು ಏಪ್ರಿಲ್ನಿಂದ ಹೆಚ್ಚಿಸುತ್ತೇವೆ ಎನ್ನುವುದು ಮೂಗಿಗೆ ತುಪ್ಪ ಸವರಿದಂತೆ. ಇದನ್ನು ವಿಧಾನಸಭೆ, ವಿಧಾನಪರಿಷತ್, ಸಚಿವಾಲಯ ಸಿಬ್ಬಂದಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಸರ್ಕಾರದ ಮುಂದೆ ವೇತನ ಹೆಚ್ಚಳಕ್ಕಿಂತ ಒಪಿಎಸ್ ಜಾರಿ ನಮ್ಮ ಮುಖ್ಯ ಬೇಡಿಕೆಯಾಗಿತ್ತು. ನೂತನ ಪಿಂಚಣಿ ಸರ್ಕಾರಿ ನೌಕರರಿಗೆ ಮಾರಕವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ನೌಕರರ ಸಂಘ ಅಧ್ಯಕ್ಷ ಷಡಕ್ಷರಿ, ಗುರುಸ್ವಾಮಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಲ್ಲ, ಅವರು ಹಂಗಾಮಿ ಅಧ್ಯಕ್ಷರಷ್ಟೆ ಎಂದಿದ್ದಾರೆ.






































