ಕಾರ್ಕಳ : ಸೆ. 2ರಂದು ಮಂಗಳೂರು ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಕಳ ತಾಲೂಕು ಬೈಲೂರು ಥೀಮ್ ಪಾರ್ಕ್‌ನಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮನ ಕಲಾಕೃತಿ ಹೋಲುವ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಲಾಗುತ್ತಿದೆ. ತುಳುನಾಡಿನ ವೈಶಿಷ್ಟ್ಯ ಬಿಂಬಿಸುವ ನಿಟ್ಟಿನಲ್ಲಿ ಪಂಚಲೋಹದ ಪರಶುರಾಮ ಮೂರ್ತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಹೀಗಾಗಿ ಈ ಮೂರ್ತಿ ದೆಹಲಿಯ ಪ್ರಧಾನಿ ಕಾರ್ಯಾಲಯ ತಲುಪಲಿದೆ.
ಕಾರ್ಕಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ (ಉಡುಪಿ ರಸ್ತೆ) ಬೈಲೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ. ಕಾರ್ಕಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ, ಸಚಿವ ವಿ. ಸುನೀಲ್ ಕುಮಾರ್ ಅವರ ವಿಶೇಷ ಮುತುವರ್ಜಿ, ಕಲ್ಪನೆಯಂತೆ ಥೀಮ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಬಹುತೇಕ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಡಿಸೆಂಬರ್ ವೇಳೆ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಬೈಲೂರು ರಾಜ್ಯದ ಪ್ರವಾಸಿ ತಾಣಗಳಲ್ಲಿ ಗುರುತಿಸಿಕೊಳ್ಳಲಿದೆ.
ರಾಷ್ಟ್ರಪತಿ ಭವನ ಅಲಂಕರಿಸಿದ ಕಾರ್ಕಳದ ಪ್ರತಿಮೆ
ಕಾರ್ಕಳದ ಅನೇಕ ಪ್ರತಿಮೆಗಳು ದೇಶ, ವಿದೇಶದ ಹಲವಾರು ದೇಗುಲಗಳಲ್ಲಿ ಪ್ರತಿಷ್ಠಾಪನೆಗೊಂಡು ಆರಾಧಿಸಲ್ಪಡುತ್ತಿವೆ. ಎರಡು ವರ್ಷಗಳ ಹಿಂದೆ ಇಲ್ಲಿನ ಹತ್ತು ಶಿಲಾಮೂರ್ತಿಗಳು ರಾಷ್ಟ್ರಪತಿ ಭವನ ಅಲಂಕರಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಈ ಮೂರ್ತಿಗಳನ್ನು ವಿಜಯ ಶಿಲ್ಪ ಶಾಲೆಯಲ್ಲಿ ನೆಲ್ಲಿಕಾರು ಕೃಷ್ಣಶಿಲೆಯಿಂದ 2 ಅಡಿ ಎತ್ತರದಲ್ಲಿ ಕೆತ್ತಲಾಗಿದೆ. ಮಹಾಭಾರತದ ದೃಶ್ಯವೊಂದನ್ನು ಕೆತ್ತಲಾಗಿರುವ ಮೂರ್ತಿ, ಭಗವಾನ್ ಶ್ರೀ ಬಾಹುಬಲಿ, ಹಿರಿಯಂಗಡಿ ಬಸದಿಯ ಮಾನಸ್ತಂಭ ಪ್ರತಿಕೃತಿ, ವರಕವಿ ಮುದ್ದಣ, ನಾಗರಾಜ ನಾಗರಾಣಿ, ಸೋಮೇಶ್ವರ ಸ್ತಂಭ, ಗಜ-ಸಿಂಹ, ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಕೇಶವ ಮೂರ್ತಿಗಳು ರಾಷ್ಟ್ರಪತಿಭವನ ಸೇರಿದ ಇಲ್ಲಿನ ಶಿಲಾಮೂರ್ತಿಗಳು.


























