ಮುಂಬೈ ಪೊಲೀಸ್‌ ಅಧಿಕಾರಿ ದಯಾನಾಯಕ್‌ ನ್ಯೂಸ್‌ ಕಾರ್ಕಳ ಕಚೇರಿಗೆ ಭೇಟಿ

ಕಾರ್ಕಳ : ಭೂಗತ ಜಗತ್ತಿನ ರೌಡಿಗಳಿಗೆ ಸಿಂಹಸ್ವಪ್ನರಾಗಿ ಕಾಡಿದ್ದ ಕಾರ್ಕಳ ಮೂಲದ ಮುಂಬೈ ಪೊಲೀಸ್‌ ಅಧಿಕಾರಿ ದಯಾನಾಯಕ್‌ ಗುರುವಾರ ನ್ಯೂಸ್‌ ಕಾರ್ಕಳ ಕಚೇರಿಗೆ ಭೇಟಿ ನೀಡಿದರು. ಪ್ರಸ್ತುತ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಯಾನಾಯಕ್‌ ಮುಂಬೈ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳನ್ನು ಇಹಲೋಕ ತ್ಯಜಿಸುವಂತೆ ಮಾಡಿದವರು. ಈ ಮೂಲಕ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿ ಪಡೆದವರು.

ಕಾರ್ಕಳ ಎಣ್ಣೆಹೊಳೆಯಲ್ಲಿ 7ನೇ ತರಗತಿ ಓದಿರುವ ದಯಾನಾಯಕ್‌ ಉದ್ಯೋಗ ಅರಸಿ ಮುಂಬೈಯತ್ತ ಮುಖ ಮಾಡಿದರು. ಹೊಟೇಲ್‌ ಕ್ಯಾಂಟೀನ್‌ ಸೇರಿದ ಅವರು ಬಹಳ ಕಷ್ಟದಿಂದಲೇ ಓದು ಮುಂದುವರಿಸಿ ಪದವಿ ಗಳಿಸಿದರು. ಅನಂತರ ಪ್ಲಂಬರ್‌ ಸೂಪರ್‌ವೈಸರ್‌ ಆಗಿ ವೃತ್ತಿ ಜೀವನ ಆರಂಭಿಸಿದ ದಯಾನಾಯಕ್‌ 1995ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡರು.

ಕಡು ಬಡತನದಲ್ಲಿ ಓದಿ, ಬೆಳೆದಿರುವ ದಯಾನಾಯಕ್‌ ತನ್ನೂರಿನ ಮಕ್ಕಳು ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಯಾವೊಂದು ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಎಣ್ಣೆಹೊಳೆಯಲ್ಲಿ ತನ್ನ ತಾಯಿ ಹೆಸರಲ್ಲಿ ರಾಧಾ ನಾಯಕ್‌ ಪ್ರೌಢಶಾಲೆ‌ (2000 ಇಸವಿ) ಸ್ಥಾಪಿಸಿದ್ದರು. ಅತ್ಯಂತ ಸುಂದರ, ಸುಸಜ್ಜಿತವಾಗಿರುವ ನಿರ್ಮಾಣವಾಗಿರುವ ಈ ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್‌ ತಾರೆಯರಾದ ಅಮಿತಾಬ್ ಬಚ್ಚನ್‌, ಸುನೀಲ್‌ ಶೆಟ್ಟಿ, ಅಫ್ತಬ್‌ ಶಿವದಾಸನಿ, ಪಕ್ಷಿ ತಜ್ಞ ಎಂ.ಎಫ್.‌ ಹುಸೇನ್‌ ಆಗಮಿಸಿದ್ದರು. ದಯಾನಾಯಕ್ ಅವರ ಜೀವನ, ಸಾಧನೆ ಕುರಿತು ವಿವಿಧ ಭಾಷೆಗಳಲ್ಲಿ ಹತ್ತಾರು ಸಿನೆಮಾ, ಧಾರಾವಾಹಿಗಳು ನಿರ್ಮಾಣವಾಗಿರುವುದೇ ಅವರ ಸಾಧನೆಗೆ ಸಾಕ್ಷಿಯಾಗಿದೆ.

ಸುಮಾರು 1 ಗಂಟೆಗಳ ಕಾಲ ನ್ಯೂಸ್‌ ಕಾರ್ಕಳ ಕಚೇರಿಯಲ್ಲಿದ್ದ ದಯಾನಾಯಕ್‌ ತನ್ನ ಬಾಲ್ಯದ ಬಗೆಗೆ ಮೆಲುಕು ಹಾಕಿದರು. ಕಾರ್ಕಳದ ನಂಟು, ವೃತ್ತಿ ಜೀವನದ ಕುರಿತು ಮುಕ್ತವಾಗಿ ಮಾತನಾಡಿದರು. ನ್ಯೂಸ್‌ ಕಾರ್ಕಳದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ದಯಾನಾಯಕ್‌ ಸಿಬ್ಬಂದಿಯೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತರು. ಈ ವೇಳೆ ಸಿಯಾ ಸಂತೋಷ್‌ ನಾಯಕ್‌, ಗುಣಪಾಲ್‌ ಜೈನ್‌ ಉಪಸ್ಥಿತರಿದ್ದರು.



















































error: Content is protected !!
Scroll to Top