Friday, August 19, 2022
spot_img
Homeಸುದ್ದಿಗ್ರಾಮ ಸಹಾಯಕರಿಗೆ ಕೈದಿಗಳ ದಿನಗೂಲಿಯೂ ಇಲ್ಲ

ಗ್ರಾಮ ಸಹಾಯಕರಿಗೆ ಕೈದಿಗಳ ದಿನಗೂಲಿಯೂ ಇಲ್ಲ

ನ್ಯೂಸ್‌ ಕಾರ್ಕಳ ವಿಶೇಷ ವರದಿ

ಅಸಹಾಯಕ ಗ್ರಾಮ ಸಹಾಯಕರು

ಕಾರ್ಕಳ : ಗ್ರಾಮಸ್ಥರಿಗೆ ಸರಕಾರಿ ಸೌಲಭ್ಯ ಒದಗಿಸಿಕೊಡುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಸಿಗುವ ಸಂಬಳ ಮಾತ್ರ ಯಾವ ಮೂಲೆಗೆ ಸಾಕಾಗುತ್ತಿಲ್ಲ. ವಿಪರ್ಯಾಸವೆಂದರೆ ಜೈಲಿನಲ್ಲಿರುವ ಕೈದಿಗಳಿಗೆ ಸಿಗುವಷ್ಟು ದಿನಕೂಲಿ ಕೂಡ ಗ್ರಾಮ ಸಹಾಯಕರಿಗೆ ದೊರೆಯುತ್ತಿಲ್ಲ. ಈ ಚಿಲ್ಲರೆ ಸಂಬಳವನ್ನು ಕೂಡ ಸರಿಯಾರಿ ಕೊಡುತ್ತಿಲ್ಲ. ಕೆಲವೊಮ್ಮೆ ಮೂರು ತಿಂಗಳವರೆಗೆ ಕಾಯಬೇಕೆನ್ನುವುದು ವಾಸ್ತವ.
ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕಾರ್ಯವೂ ಗ್ರಾಮ ಸಹಾಯಕರ ಮೂಲಕವೇ ಆಗಬೇಕು. ಗ್ರಾಮದಲ್ಲಿ ಅದೇನೆ ತೊಂದರೆಯಾದರೂ ಮೊದಲು ಭೇಟಿ ನೀಡುವುದು ಇದೇ ಗ್ರಾಮ ಸಹಾಯಕ. ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ಮಾಸಾಶನ, ಮನಸ್ವಿನಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಿಗೆಲ್ಲ ಗ್ರಾಮ ಸಹಾಯಕರನ್ನೇ ಸಂಪರ್ಕಿಸಲಾಗುತ್ತಿದೆ.
ಜನನ-ಮರಣದ ಮಾಹಿತಿ, ಚುನಾವಣೆ ವೇಳೆ ಕಾರ್ಯನಿರ್ವಹಣೆ, ಭೂ ಕಂದಾಯ ತೆರಿಗೆ ವಸೂಲಾತಿ, ತಾಲೂಕು ಕಚೇರಿಯ ಕೆಲಸ ಕಾರ್ಯಗಳ ನಿರ್ವಹಣೆಯೊಂದಿಗೆ ಮನೆ ಮನೆ ಭೇಟಿ, ಬೆಳೆ ಸಮೀಕ್ಷೆಯ ಜವಾಬ್ದಾರಿಯನ್ನು ಗ್ರಾಮ ಸಹಾಯಕರೇ ನಿಭಾಯಿಸುತ್ತಾರೆ. ಇದರೊಂದಿಗೆ ತಿಂಗಳಿಗೆ ಒಂದೆರಡು ಬಾರಿ ತಾಲೂಕು ಕಚೇರಿಯಲ್ಲಿ ರಾತ್ರಿ ಪಾಳಿ ಕಾವಲು ಕಾರ್ಯವನ್ನೂ ಮಾಡಬೇಕಾದ ಅನಿವಾರ್ಯತೆಯೂ ಗ್ರಾಮಸಹಾಯಕರದ್ದು.
ಪ್ರಾಕೃತಿಕ ವಿಕೋಪದ ಸಂದರ್ಭ ಕಂಟ್ರೋಲ್‌ ರೂಂಗೂ ಇದೇ ಗ್ರಾಮ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತಿದೆ. ಸಾಮಾಜಿಕ ಭತ್ಯೆ ಒದಗಿಸಿಕೊಡುವ, ಗ್ರಾಮದ ಸಮಗ್ರ ಮಾಹಿತಿ ಹೊಂದಿರುವ ಗ್ರಾಮ ಸಹಾಯಕರಿಗೆ ಮಾತ್ರ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ದೊರೆಯುವ ವೇತನವೂ ತಿಂಗಳಿಗೆ 13 ಸಾವಿರ ರೂ.
2018ರ ಎಪ್ರಿಲ್‍ನಲ್ಲಿ 10 ಸಾವಿರವಿದ್ದ ವೇತನವನ್ನು 12 ಸಾವಿರಕ್ಕೆ ಏರಿಸಲಾಗಿದೆ. ಕಳೆದ ಎಪ್ರಿಲ್‌ನಿಂದ 13 ಸಾವಿರ ನೀಡಲಾಗುತ್ತಿದೆ. ಈ ಹಣದಲ್ಲಿ ನೌಕರರು ಕುಟುಂಬ ನಿರ್ವಹಣೆ ಮಾಡುವುದೇ ದುಸ್ತರ. ಅದನ್ನು ಕೂಡ ಸರಕಾರ ಸಕಾಲಕ್ಕೆ ಪಾವತಿ ಮಾಡದೆ ಮೂರು ತಿಂಗಳಿಗೊಮ್ಮೆ ನೀಡುತ್ತಿರುವುದರಿಂದ ನೌಕರರ ಪಾಡು ಹೇಳತೀರದು. ಸರಕಾರದ ಈ ನೀತಿಯೇ ಕೆಲವೊಮ್ಮೆ ಗ್ರಾಮ ಸಹಾಯಕರನ್ನು ಲಂಚಕ್ಕೆ ಕೈ ಚಾಚುವಂತೆ ಮಾಡುತ್ತಿದೆ. ಇತರ ಸರಕಾರಿ ನೌಕರರಿಗೆ ನೀಡುವಂತೆ ಸರಕಾರ ಉತ್ತಮ ವೇತನ ನೀಡಿದಲ್ಲಿ, ಗ್ರಾಮ ಸಹಾಯಕರು ಲಂಚಕ್ಕಾಗಿ ಕೈ ಚಾಚದಂತೆ ಮಾಡಬಹುದು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಗ್ರಾಮ ಸಹಾಯಕರ ವೇತನ ಬಗ್ಗೆ ಪ್ರಸ್ತಾಪವಾದಾಗ ಉತ್ತರಿಸಿದ ಕಂದಾಯ ಸಚಿವ ಆರ್.‌ ಅಶೋಕ್‌ ಮಾನವೀಯತೆ ನೆಲೆಯಲ್ಲಿ ಅವರಿಗೆ ಸಂಬಳ ನೀಡಲಾಗುತ್ತಿದೆ. ಕೆಲಸದ ವಿಚಾರದಲ್ಲಿ ಗ್ರಾಮಕರಣಿಕರ ಕಾರ್ಯವನ್ನೂ ಗ್ರಾಮ ಸಹಾಯಕರು ನಿರ್ವಹಿಸುತ್ತಾರೆ ಎಂದು ಹೇಳಿದ್ದಾರೆ.

ಭದ್ರತೆಯಿಲ್ಲ

ಕೆಲವೊಂದು ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ವರ್ಗಕ್ಕೆ ಹಂತ ಹಂತವಾಗಿ ಸೇವಾ ಕಾಯಂಮಾತಿ ನೀಡುತ್ತಿದೆ. ಆದರೆ, ಗ್ರಾಮ ಸಹಾಯಕರನ್ನು ಕಾಯಂಗೊಳಿಸುವ ನಿರ್ಧಾರಕ್ಕೆ ಯಾವ ಸರಕಾರವೂ ಬಂದಿಲ್ಲ. ಹೀಗಾಗಿ ಅದೆಷ್ಟೋ ದಶಕಗಳಿಂದ ಗ್ರಾಮ ಸಹಾಯಕರಾಗಿ ದುಡಿಯುತ್ತಿರುವ ನೌಕರರು ಸರಕಾರದ ಯಾವೊಂದು ಸೌಲಭ್ಯ ಪಡೆಯದೆ ನಿವೃತ್ತರಾಗಬೇಕಾದ ದುಃಸ್ಥಿತಿಯಿದೆ. ಹುದ್ದೆ ಕಾಯಂಮಾತಿಗಾಗಿ ನೌಕರರು ಸರಕಾರಕ್ಕೆ ಹಲವಾರು ಬಾರಿ ಮನವಿ, ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮುಂಬಡ್ತಿಯೂ ಇಲ್ಲ

ಗ್ರಾಮ ಸಹಾಯಕರಾಗಿ ಒಮ್ಮೆ ಕಂದಾಯ ಇಲಾಖೆಗೆ ಸೇರ್ಪಡೆಯಾದಲ್ಲಿ ಅರ್ಹತೆ ಆಧಾರದ ಮೇಲೆ ಮುಂಬಡ್ತಿ ನೀಡುವ ಪದ್ಧತಿಯಿಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿ ಬಡ್ತಿ ನೀಡುವ ಪ್ರಕ್ರಿಯೆಯಿದ್ದರೂ ಗ್ರಾಮ ಸಹಾಯಕರು ಇದರಿಂದಲೂ ವಂಚಿತ. ಪ್ರಾವಿಡೆಂಟ್‌ ಫಂಡ್‌, ಕಾರ್ಮಿಕ ರಾಜ್ಯ ವಿಮೆಯೂ ಇವರಿಗಿಲ್ಲ.

10,450 ಗ್ರಾಮಸಹಾಯಕರು

ರಾಜ್ಯದಲ್ಲಿ ಒಟ್ಟು 10,450 ಮಂದಿ ಗ್ರಾಮ ಸಹಾಯಕರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 222, ದ.ಕ. ಜಿಲ್ಲೆಯಲ್ಲಿ 343 ಮಂದಿ ಗ್ರಾಮ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದಲ್ಲ ನಾಳೆಯಾದರೂ ತಮ್ಮ ಹುದ್ದೆ ಕಾಯಂಗೊಳ್ಳಲಿದೆ ಎನ್ನುವ ನಂಬಿಕೆಯೊಂದಿಗೆ ದಶಕಗಳಿಂದ ದುಡಿಯುತ್ತಿದ್ದಾರೆ.

ಕೈದಿಗಳ ಕೂಲಿಯೂ ಇಲ್ಲ

ರಾಜ್ಯದ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ರಾಜ್ಯ ಸರಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ ದರವನ್ನು ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಶ್ವಾಸನೆ ನೀಡಿದ್ದಾರೆ. ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ಕೂಲಿ ಅಂದರೆ 525 ರೂ. ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 7 ಕೋಟಿ ರೂ. ವಿಶೇಷ ಅನುದಾನ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದರು. ಒಬ್ಬ ಗ್ರಾಮ ಸಹಾಯಕರಿಗೆ ಪ್ರಸ್ತುತ ದಿನವೊಂದಕ್ಕೆ 433 ರೂ. ಪಾವತಿಯಾಗುತ್ತಿದ್ದರೆ. ಕೈದಿಗೆ 525 ರೂ. ನಿಗದಿ ಮಾಡಲಾಗಿದೆ. ಅಂದರೆ ಓರ್ವ ಕೈದಿಯ ದಿನಕೂಲಿಯೂ ಗ್ರಾಮ ಸಹಾಯಕನಿಗಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

2007ರಲ್ಲಿ ಗ್ರಾಮ ಸಹಾಯಕ ಎಂಬ ಹುದ್ದೆ ನೀಡಲಾಯಿತಾದರೂ ಸರಕಾರದಿಂದ ಗೌರವಧನದ ನೆಲೆಯಲ್ಲಿ ಅತ್ಯಲ್ಪ ಮೊತ್ತ ನೀಡಲಾಗುತ್ತಿದೆ. ಹೀಗಾಗಿ ಮನೆ ಖರ್ಚು ಹೊಂದಿಸುವುದೇ ಕಷ್ಟಕರವಾಗಿದೆ. ಗ್ರಾಮ ಸಹಾಯಕರ ಹುದ್ದೆಯನ್ನು ಕಾಯಂಗೊಳಿಸಿ ಡಿ ಗ್ರೂಪ್ ನೌಕರರೆಂದು ಪರಿಗಣಿಸುವಂತೆ ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಇನ್ನಾದರೂ ಸರಕಾರ ಗ್ರಾಮ ಸಹಾಯಕರ ಬೇಡಿಕೆ ಈಡೇರಿಸಿ ನಮಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ.
ಮಾಧವ ನಾಯಕ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಗ್ರಾಮ ಸಹಾಯಕರ ಸಂಘ, ಉಡುಪಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!