Wednesday, August 17, 2022
spot_img
Homeಅಂಕಣಆರೋಗ್ಯಧಾರಾ- ಅಧಿಕ ರಕ್ತದೊತ್ತಡ ಆತಂಕ ಬೇಡ

ಆರೋಗ್ಯಧಾರಾ- ಅಧಿಕ ರಕ್ತದೊತ್ತಡ ಆತಂಕ ಬೇಡ

ಅಧಿಕ ರಕ್ತದೊತ್ತಡ ಅಥವಾ ಬಿಪಿ ಈಗ ಬಹುತೇಕ ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ. ಇದಕ್ಕೆ ನಿಯಮಿತವಾಗಿ ಮಾತ್ರೆ ಸೇವಿಸಬೇಕಾದರೂ ಕೆಲವರಿಗೆ ಮಾತ್ರೆಯಿಂದಲೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಅಧಿಕ ರಕ್ತದೊತ್ತಡ ಇದ್ದರೆ ಯಾವಾಗ ಏನು ಆಗಿ ಬಿಡುತ್ತದೆ ಎನ್ನುವ ಆತಂಕದಲ್ಲೇ ಬದುಕು ಸಾಗಿಸಬೇಕಾಗುತ್ತದೆ.
ಈ ಆತಂಕದಿಂದ ರಕ್ತ ಒತ್ತಡ ಇನ್ನೂ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ರಕ್ತ ನಮ್ಮ ದೇಹದ ಎಲ್ಲಾ ಭಾಗದ ಜೀವಕೋಶಕ್ಕೆ ಸರಬರಾಜು ಆಗುತ್ತದೆ. ವಿಪರೀತ ಅನಾರೋಗ್ಯಕರ ಆಹಾರ ಸೇವನೆ ಮಾನಸಿಕ ಒತ್ತಡ ಹಾಗೂ ಶಾರೀರಿಕ ಶ್ರಮದ ಕೊರತೆ ಅಧಿಕ ರಕ್ತದ ಒತ್ತಡಕ್ಕೆ ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡ ಅನೇಕ ಹೃದಯ ಸಂಬಂಧಿ ರೋಗಗಳಿಗೆ ಆಹ್ವಾನ ನೀಡುತ್ತದೆ. ಮೆದುಳು ಹಾಗೂ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಜೀವನ ಶೈಲಿ ಹಾಗೂ ನಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಇದರಿಂದ ಸಮಸ್ಯೆಯನ್ನು ತಡೆಗಟ್ಟಬಹುದು
120/80mmHg ರಕ್ತದೊತ್ತಡದ ನಾರ್ಮಲ್ ರೇಂಜ್. ಆದರೆ ಇದು ನಮ್ಮ ದೇಹ ಪ್ರಕೃತಿಯ ಮೇಲೆ ಹಾಗೂ ನಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ನಿಮಗೆ ಅಧಿಕ ರಕ್ತದೊತ್ತಡ ಇದೆಯೋ ಇಲ್ಲವೋ ಎಂದು ತಜ್ಞ ವೈದ್ಯರಿಂದ ಪರಿಶೀಲಿಸಿ ತಿಳಿದುಕೊಳ್ಳಬೇಕು.
ಅಧಿಕ ರಕ್ತದೊತ್ತಡಕ್ಕೆ ಕಾರಣಗಳು
ಅಧಿಕ ಉಪ್ಪಿನ ಸೇವನೆ, ಬೊಜ್ಜು, ನಿದ್ರಾಹೀನತೆ, ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡದ ಕಾಯಿಲೆಗಳು, ಮಾನಸಿಕ ಒತ್ತಡ, ಶಾರೀರಿಕ ಶ್ರಮದ ಕೊರತೆ ಇತಯಾದಿ ಕಾರಣಗಳಿಂದ ಅಧಿಕ ರಕ್ತದೊತ್ತಡ ಬರಬಹುದು.

ನಮ್ಮ ಜೀವನ ಶೈಲಿ ಹೀಗೆ ಇರಲಿ
• ಶುಚಿಯಾದ ಬಿಸಿ ಶೀಘ್ರ ಪಚನವಾಗುವ ಆಹಾರವನ್ನು ಸೇವಿಸಿ. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ಉಪ್ಪಿನ ಬಳಕೆ ಕಡಿಮೆಮಾಡಬೇಕು. ಸೈಂಧವ ಲವಣವನ್ನು ಬಳಸಿ. ಕರಿದ ಪದಾರ್ಥ, ಜಂಕ್‌ಫುಡ್, ಖಾರ, ಮಸಾಲೆಯುಕ್ತ ಆಹಾರವನ್ನು ಕಡಿಮೆ ಸೇವಿಸಿ. ಆದಷ್ಟು ಸಾತ್ವಿಕ ಆಹಾರವನ್ನು ಸೇವಿಸಿ.ಹಣ್ಣು ತರಕಾರಿಗಳನ್ನು ಸೇವಿಸಿ.
• ಪ್ರತಿದಿನ ನಡಿಗೆ, ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಯಾವುದಾದರೂ ರೂಢಿಸಿಕೊಳ್ಳಿ. ಪ್ರಾಣಾಯಾಮದಲ್ಲಿ ಅನುಲೋಮ ವಿಲೋಮ ಪ್ರಾಣಾಯಾಮ, ಭ್ರಾಮರಿ, ಶೀತಲಿ, ಶೀತಕಾರಿ ಪ್ರಾಣಾಯಾಮ ಒಳ್ಳೆಯದು. ಕಪಾಲಭಾತಿ ಹಾಗೂ ಭಸ್ತ್ರಿಕಾ ಪ್ರಾಣಾಯಾಮ ಮಾಡುವುದು ಸೂಕ್ತವಲ್ಲ. ಯೋಗಾಸನಗಳಲ್ಲಿ ವಜ್ರಾಸನ, ಶವಾಸನ, ಬಾಲಾಸನ, ವಿಪರೀತಕರಣಿ, ಸೇತುಬಂಧಾಸನ, ಅಧೋಮುಖ, ಶ್ವಾನಾಸನ, ಪಶ್ಚಿಮೋತ್ತಾಸನ, ಬದ್ಧಕೋನಾಸನ ಒಳ್ಳೆಯದು.
• ಮನಸ್ಸು ಶಾಂತವಾಗಿ ಇದ್ದರೆ ಅಧಿಕ ರಕ್ತದೊತ್ತಡ ನಿಯಂತ್ರದಣದಲ್ಲಿರುತ್ತದೆ. ನಿತ್ಯ ಕನಿಷ್ಠ ಹತ್ತು ನಿಮಿಷವಾದರೂ ಧ್ಯಾನ ಮಾಡಿ ಅಥವಾ ಸಂಗೀತವನ್ನು ಕೇಳಿ, ನಿಮಗಿಷ್ಟವಾದ ಹವ್ಯಾಸವನ್ನು ಬೆಳೆಸಿಕೊಳ್ಳಿ. ಕುಟುಂಬದ ಜತೆ ಅಥವಾ ಸ್ನೇಹಿತರೊಡನೆ ಕಾಲ ಕಳೆಯಿರಿ. ಮಕ್ಕಳ ಜತೆ ಪ್ರಾಣಿಗಳ ಜತೆ ಒಡನಾಟವಿರಲಿ. ಪ್ರಕೃತಿಯ ಜತೆ ಕಾಲ ಕಳೆಯಿರಿ. ಆದಷ್ಟು ಖುಷಿಯಾಗಿರಲು ಪ್ರಯತ್ನಿಸಿ. ಋಣಾತ್ಮಕ ಭಾವನೆಯಿಂದ ದೂರವಿರಿ.

ಮನೆ ಮದ್ದು
• ಗರಿಕೆ ಹುಲ್ಲಿನ ರಸ ಒಂದು ಚಮಚ ದಿನಕ್ಕೆ ಎರಡು ಬಾರಿ ಸೇವಿಸಿ.
• ಎರಡೆರಡು ಬಿಂದು ತೆಂಗಿನಎಣ್ಣೆ ಅಥವಾ ತುಪ್ಪ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂಗಿಗೆ ಹಾಕಿ.
• ರಾತ್ರಿ ಮಲಗುವ ಮುಂಚೆ ಪಾದ ಅಭ್ಯಂಗ ಮಾಡಿ. ಯಾವುದಾದರೂ ಎಣ್ಣೆ ಪಾದಗಳಿಗೆ ಹಚ್ಚಿ ಸ್ವಲ್ಪ ಹೊತ್ತು ತಿಕ್ಕಿ. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಒಳ್ಳೆಯ ನಿದ್ದೆ ಬಂದರೆ ರಕ್ತದೊತ್ತಡ ನಿಯಂತ್ರಿಸಲು ಸಹಾಯವಾಗುತ್ತದೆ .
• ಅರ್ಜುನ ಚೂರ್ಣ ಒಂದು ಚಮಚ, ಅರ್ಧ ಲೋಟ ಹಾಲು , ಒಂದು ಲೋಟ ನೀರು ಹಾಕಿ ಹಾಲು ಮಾತ್ರ ಉಳಿಯುವವರೆಗೆ ಕುದಿಸಿ ನಂತರ ಬಿಸಿಯಾಗಿ ಸೇವಿಸಿ.
• ಪಂಚಕರ್ಮದಲ್ಲಿ ನಸ್ಯ ಕರ್ಮ ಒಳ್ಳೆಯ ಪರಿಣಾಮ ನೀಡುತ್ತದೆ.
• ಆಯುರ್ವೇದ ಔಷಧಗಳು – ಮುಕ್ತಾ ವಟಿ, ಬ್ರಾಹ್ಮಿ ವಟಿ, ಅಶ್ವಗಂಧ, ಅರ್ಜುನ ಕಷಾಯ ಮುಂತಾದವುಗಳು.
ಡಾ. ಹರ್ಷಾ ಕಾಮತ್
ಆಯುರ್ವೇದ ತಜ್ಞರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!