Wednesday, August 17, 2022
spot_img
Homeಸುದ್ದಿಪ್ರಾಮಾಣಿಕ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ

ಪ್ರಾಮಾಣಿಕ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ

ಮಾಜಿ ಶಾಸಕ ಗೋಪಾಲ ಭಂಡಾರಿಯವರು ಭ್ರಷ್ಟಾಚಾರ ರಹಿತ, ನೇರ ನಡೆನುಡಿಯ, ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿರುವ ಅಪರೂಪದ ರಾಜಕೀಯ ನಾಯಕರ ಸಾಲಿಗೆ ಸೇರಿದವರು. ತಾನೆಷ್ಟು ಕಷ್ಟದಲ್ಲಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಮರುಗುವ , ಕೈಲಾದಷ್ಟು ನೆರವಾಗುವ ಮಾನವೀಯ ಗುಣಗಳು ಅವರಲ್ಲಿದ್ದವು. ಕೇವಲ ತನ್ನ ಸಾಮರ್ಥ್ಯ ಮತ್ತು ಸ್ವಚ್ಛ ಇಮೇಜ್‌ ಮೂಲಕವೇ ವಿಧಾನಸಭೆ ಪ್ರವೇಶಿಸಿದ ಗೋಪಾಲ ಭಂಡಾರಿಯವರ ರಾಜಕೀಯ ಜೀವನ ತೆರೆದಿಟ್ಟ ಪುಸ್ತಕದಂತೆ. ಶಾಸಕರಾಗಿ ಕಾರ್ಕಳದ ಅಭಿವೃದ್ಧಿಗೆ ಅವರ ಕೊಡುಗೆ ಸಾಕಷ್ಟಿದೆ. ಆದರೆ ಹಾಗೆಂದು ಅದನ್ನು ಅವರು ಪುಟಗಟ್ಟಲೆ ಜಾಹೀರಾತು ನೀಡಿ ಅಥವಾ ಬೆಂಬಲಿಗರನ್ನು ಮತ್ತು ಕಾರ್ಯಕರ್ತರನ್ನು ಸೇರಿಸಿ ದೊಡ್ಡ ದೊಡ್ಡ ಸಭೆ, ರಾಲಿಗಳನ್ನು ಮಾಡಿ ಸಾರಿಕೊಂಡು ಬಂದವರಲ್ಲ. ಗೋಪಾಲ ಭಂಡಾರಿಯವರು ತೀರಿಕೊಂಡು ಇಂದಿಗೆ ಮೂರು ವರ್ಷ. ಈಗಲೂ ಬಡ ಜನರ ಮನದಲ್ಲಿ ಗೋಪಾಲ ಭಂಡಾರಿಯವರ ನೆನಪು ಹಸಿರಾಗಿದೆ. ಈ ಸಂರ್ಭದಲ್ಲಿ ಅವರನ್ನು ಸ್ಮರಿಸಿಕೊಳ್ಳುವ ಒಂದು ಪ್ರಯತ್ನ ಇದು.
ಜಾತಿ ಬಲ, ಹಣ ಬಲ, ತೋಳ್ಬಲ ಉಳ್ಳವರು ನೇರವಾಗಿ ವಿಧಾನಸಭೆ, ಲೋಕಸಭೆಗೆ ಚುನಾವಣೆ ಮೂಲಕ ಪ್ರವೇಶವಾಗುವುದನ್ನು ಕಾಣುತ್ತೇವೆ. ಆದರೆ, ಪರಿಪಕ್ವ ರಾಜಕಾರಣಿ, ಪ್ರಾಮಾಣಿಕ ವ್ಯಕ್ತಿತ್ವದ ಗೋಪಾಲ ಭಂಡಾರಿ ಅದ್ಯಾವುದೂ ಇಲ್ಲದೆ ಗೆದ್ದು ವಿಧಾನಸಭೆ ಪ್ರವೇಶಿಸಿದವರು ಎಂಬುದು ಅವರ ಹೆಗ್ಗಳಿಕೆ. ತಾಲೂಕು ಪಂಚಾಯತ್‌ ಸದಸ್ಯರಾಗಿ, ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್‌ ಸದಸ್ಯರಾಗಿ, ವಿವಿಧ ಮಂಡಳಿ, ಸಂಘಗಳ ಅಧ್ಯಕ್ಷರಾಗಿ, ಭೂನ್ಯಾಯ ಮಂಡಳಿ ಅಕ್ರಮ-ಸಕ್ರಮ ಸಮಿತಿ ಸದಸ್ಯರಾಗಿ ಅಪಾರ ಸೇವೆ ನೀಡಿದವರು.
1971ರಿಂದ 1999ರ ವರೆಗೆ ಕಾರ್ಕಳ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಗರಡಿಯಲ್ಲಿ ಬೆಳೆದು 1999 ಮತ್ತು 2008ರಲ್ಲಿ ಎರಡು ಅವಧಿಗೆ ಕಾರ್ಕಳದ ಶಾಸಕರಾಗಿ ಆಯ್ಕೆಯಾಗಿ ಗಮನಾರ್ಹ ಸೇವೆ ನೀಡಿದವರು.
ಬಡ ಕೂಲಿ ಕಾರ್ಮಿಕರಿಂದ ಹಿಡಿದು ಎಲ್ಲ ವರ್ಗಗಳ ಜನರು, ಸರಕಾರಿ ನೌಕರರು ಮತ್ತು ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿದವರು. ಇಲಾಖಾ ಅಧಿಕಾರಿಗಳು, ಸರಕಾರಿ ನೌಕರರಿಗೆ ಶಾಸಕನೆಂಬ ಅಹಂ ಇಲ್ಲದೇ ಪ್ರೀತಿಯಿಂದಲೇ ಓಲೈಸಿ ಅವರಿಂದ ಕೆಲಸ ಮಾಡಿಸುತ್ತಿದ್ದರು. ಪ್ರತಿಯೊಬ್ಬರಿಗೂ ಗೌರವ ನೀಡುತ್ತಿದ್ದ ಅವರು ಪರಿಪಕ್ವ ರಾಜಕಾರಣಿಯಾಗಿದ್ದರು.
ತನ್ನ ಕ್ಷೇತ್ರದ ಪ್ರತಿ ಹಳ್ಳಿಯ ಸಂಪರ್ಕವನ್ನು ಅವರು ಹೊಂದಿದ್ದರು. ಇಷ್ಟು ಮಾತ್ರವಲ್ಲದೆ ಪ್ರತಿಯೊಬ್ಬರ ಹೆಸರು ಕರೆದು ಗುರುತಿಸುತ್ತಿದ್ದರು.ಇದು ಗೋಪಾಲ ಭಂಡಾರಿಯವರು ತನ್ನ ಕ್ಷೇತ್ರದ ಜನರ ಜತೆಗೆ ಹೊಂದಿರುವ ಅತ್ಮೀಯತೆಗೊಂದು ನಿದರ್ಶನ.ಅವರ ಸೌಜನ್ಯ, ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವುದೇ ಸಭೆಗಳಲ್ಲಿ ಸಾರ್ವಜನಿಕ ವಿಷಯಗಳ ಬಗ್ಗೆ ವಾಗ್ಯುದ್ಧ ತಾರಕಕ್ಕೇರಿದರೂ ಅತ್ಯಂತ ಸಹನೆಯಿಂದಲೆ ಭಂಡಾರಿಯವರು ಅದನ್ನೆಲ್ಲ ನಿಭಾಯಿಸುತ್ತಿದ್ದರು.
ಸದಾ ಶ್ವೇತವಸ್ತ್ರಧಾರಿಯಾಗಿದ್ದ ಅವರ ಮನಸ್ಸು ಕೂಡ ಅಷ್ಟೇ ಸ್ವಚ್ಛ ನಿರ್ಮಲ. ವೈಯಕ್ತಿಕ ಕಾರಣಗಳಿಗೆ ಯಾರನ್ನೂ ದೂಷಿಸಿ ಮಾತನಾಡುತ್ತಿರಲಿಲ್ಲ. ಸುಮಾರು 13 ಸಾವಿರ ಗೇಣಿದಾರರಿಗೆ ಭೂನ್ಯಾಯ ಮಂಡಳಿ ಮೂಲಕ ಭೂಮಿ ಮಂಜೂರು ಮಾಡಿದ, ಅದಕ್ಕಿಂತಲೂ ಹೆಚ್ಚು ಮನೆ ನಿವೇಶನ ಒದಗಿಸಿದ ಜನನಾಯಕ ಅವರು. ಭಂಡಾರಿ ಅವರು ಪ್ರತಿಫಲಾಫೇಕ್ಷೆ ಬಯಸದ ರಾಜಕಾರಣಿ. ತಮ್ಮಿಂದಲೇ ಹೆಚ್ಚು ಪ್ರಯೋಜನ ಪಡೆದು, ಹಿಂದಿನಿಂದ ಷಡ್ಯಂತ್ರ ಮಾಡುವ ವ್ಯಕ್ತಿಗಳ ಬಗ್ಗೆ ಗೊತ್ತಿದ್ದರೂ ಅವರನ್ನು ದೂಷಿಸಿದವರಲ್ಲ. 1973ರ ಭೂ ಸುಧಾರಣಾ ಕಾನೂನಿನಂತೆ ಉಳುವವನೇ ಹೊಲದೊಡೆಯನಾಗುವಂತೆ ರೈತರಿಗೆ ತಾವು ಬೇಸಾಯ ಮಾಡುವ ಭೂಮಿಯ ಡಿಕ್ಲರೇಶನ್‌ ನೀಡಲು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ಅಂದಿನಿಂದ ತನ್ನ ಕೊನೆಯ ಉಸಿರು ಇರುವ ತನಕ ಬಡವರ, ದೀನದಲಿತರ, ಅಶಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಹೆಬ್ರಿಯ ಚಾರ ಗ್ರಾಮದ ಹುತ್ತುರ್ಕೆಯಲ್ಲಿ ನಂದ್ಯಪ್ಪ ಭಂಡಾರಿ ಮತ್ತು ಗಿರಿಜಾ ದಂಪತಿಯ 8 ಮಂದಿ ಮಕ್ಕಳಲ್ಲಿ ಗೋಪಾಲ ಭಂಡಾರಿ ಹಿರಿಯರು.1952 ಜುಲೈ 7ರಂದು ಗೋಪಾಲ ಭಂಡಾರಿ ಅವರು ಜನಿಸಿದರು. ಪ್ರಕಾಶಿನಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ. ಬಡ ಕುಟುಂಬದಲ್ಲಿ ಜನಿಸಿದ ಗೋಪಾಲ ಭಂಡಾರಿ ಅವರಿಗೆ ಗೇಣಿ ನೀಡಿ ಬೇಸಾಯ ಮಾಡುವವರ ಕಷ್ಟ ಸಣ್ಣಂದಿನಿಂದಲೇ ತಿಳಿದಿತ್ತು. 60ರ ದಶಕದ ಕೊನೆಯಲ್ಲಿ ನ್ಯಾಯಗೇಣಿ ಕಾನೂನು ಬಂದಾಗಲೇ ಹದಿಹರೆಯಕ್ಕೆ ಕಾಲಿಡುತ್ತಿದ್ದ ಗೋಪಾಲ ಭಂಡಾರಿ ಅವರ ಮನದಲ್ಲಿ ಗೇಣಿದಾರರಿಗೆ ಕಿಂಚಿತ್ತಾದರೂ ಸಹಾಯ ಮಾಡಬೇಕನಿಸಿತ್ತು.ಈ ತುಡಿತವೇ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದಿತು ಎಂದರೂ ತಪ್ಪಲ್ಲ. ಬಡವರಿಗೆ ನೆರವಾಗುವ ಮಾಸಿಕ ಆರ್ಥಿಕ ಸಹಾಯದ ಅರ್ಜಿಗಳನ್ನು ಬೆಂಗಳೂರಿಗೆ ಕೊಂಡುಹೋಗಿ 2019ರ ಜು. 4ರಂದು ಹಿಂದಿರುಗಿ ಬರುವಾಗ ಬಸ್ಸಿನ ಪ್ರಯಾಣದಲ್ಲೇ ಕೊನೆಯಸಿರೆಳೆದರು.
ಗೋಪಾಲ ಭಂಡಾರಿ ಅವರು ನಮ್ಮನ್ನು ಅಗಲಿ ಮೂರು ವರ್ಷ ಸಂದರೂ ಅವರ ವಿಚಾರಧಾರೆ, ಅವರ ನೆನಪು ಕಾರ್ಕಳ ಕ್ಷೇತ್ರದಾದ್ಯಂತ ಇದೆ. ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅನನ್ಯ. ಸಾಗರಕ್ಕೆ ಸಾಗರವೇ ಉಪಮೆ ಎನ್ನುವಂತೆ ಗೋಪಾಲ ಭಂಡಾರಿ ಅವರಿಗೆ ಜನಸೇವೆಯಲ್ಲಿ ಸರಿಹೊಂದುವ ವ್ಯಕ್ತಿ ಯಾರೂ ಇಲ್ಲ. ಅವರ ಪುಣ್ಯಸ್ಮರಣೆ ಸಂದರ್ಭ ಅವರ ಆದರ್ಶಗಳು ಸರ್ವರಿಗೂ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ.
ನಕ್ರೆ ಜಾರ್ಜ್‌ ಮಾಸ್ತರ್‌

ನಕ್ರೆ ಜಾರ್ಜ್‌ ಮಾಸ್ತರ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!