ಮುಂಬೈ : ಖ್ಯಾತ ಸಂತೂರ್ ವಾದಕ, ಪದ್ಮ ವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ(84) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಿಡ್ನಿ ಸಮಸ್ಯೆಯ ಕಾರಣ ಕಳೆದ ಆರು ತಿಂಗಳಿನಿಂದ ಅವರು ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದರು.
ಖ್ಯಾತ ಸಂತೂರ್ ವಾದಕರಾಗಿದ್ದ ಶರ್ಮಾ ಸಂಗೀತ ನಿರ್ದೇಶಕರು ಸಹ ಆಗಿದ್ದರು. ಜಮ್ಮುವಿನಲ್ಲಿ ಜನಿಸಿದ ಪಂಡಿತ್ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಸಂತೂರ್ ನುಡಿಸುವುದರ ಕಲಿಕೆ ಪ್ರಾರಂಭಿಸಿದರು. 1955ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಸಂತೂರ್ ಪ್ರದರ್ಶನ ನೀಡುವ ಮೂಲಕ ಸಂತೂರ್ ವಾದನವನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದರು. ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ ಪಂಡಿತ್ ಸಿಲ್ಸಿಲಾ, ಚಾಂದಿನಿ ಮತ್ತು ಡರ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1991 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು 2001 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಂಡಿತ್ ಶಿವಕುಮಾರ್ ಶರ್ಮಾ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.
ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ
