ಪ್ರಮೋದ್ ದಾರಿ ಹಿಡಿಯುತ್ತಾರಾ ಉದಯ ಕುಮಾರ್ ಶೆಟ್ಟಿ ?

ಕಾರ್ಕಳದ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಸ್ಫೋಟಕ ಸುದ್ದಿಯೊಂದನ್ನು ನಂಬುವುದಾದರೆ ಅದು ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಬೆಚ್ಚಿ ಬೀಳಿಸುವ ಸುದ್ದಿಯಾಗಿದೆ. ಉಡುಪಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿದ ಸುದ್ದಿ ಜಿಲ್ಲೆಯಲ್ಲಿ ಒಂದು ಹಂತದ ಸಂಚಲನ ಉಂಟುಮಾಡುತ್ತಿದೆ. ಮೇಲ್ನೋಟಕ್ಕೆ ನಮಗೇನೂ ನಷ್ಟ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾ ಬಂದಿದ್ದರೂ ಪಕ್ಷದಲ್ಲಿ ಆ ಸ್ಥಾನವನ್ನು ತುಂಬುವ ಇನ್ನೊಬ್ಬ ನಾಯಕರು ಕಾಂಗ್ರೆಸ್‌ನಲ್ಲಿ ಸದ್ಯಕ್ಕಿಲ್ಲ.

ಅಲ್ಲಿ ಪ್ರಮೋದ್, ಇಲ್ಲಿ ಉದಯ ಶೆಟ್ಟರು !
ಕಾರ್ಕಳದ ಕಾಂಗ್ರೆಸ್ ನಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅತ್ಯಂತ ಪ್ರಭಾವಿ ವ್ಯಕ್ತಿ. ತನ್ನದೇ ಸಂಪಾದನೆಯ ಒಂದಷ್ಟು ಹಣವನ್ನು ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಪ್ರಸಿದ್ಧರಾದವರು. ಕಾರ್ಕಳದಲ್ಲಿ ಸದೃಢವಾಗಿ ಬೆಳೆದಿರುವ ಬಿಜೆಪಿ ಪಕ್ಷವನ್ನು ಹಣಿಯಲು
ಮುನಿಯಾಲು ಉದಯ ಶೆಟ್ಟರೇ ಸಮರ್ಥ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಅಂದು ಕೇಳಿಬರುತ್ತಿತ್ತು. ಆದರೆ, ಇದೀಗ ಉದಯ ಶೆಟ್ಟಿ ಅವರೇ ಮೇ 22ರಂದು ಅಥವಾ ಜೂ. 1ರಂದು ಸಿಎಂ ಉಡುಪಿ ಭೇಟಿ ಸಂದರ್ಭ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಕಾಂಕ್ಷಿಯಾಗಿದ್ದರು
ಕಳೆದ ವಿಧಾನ ಸಭಾ ಚುನಾವಣೆ ಘೋಷಣೆ ಆದಾಗ ಮುನಿಯಾಲು ವರ್ಸಸ್ ಸುನೀಲ್ ಕುಮಾರ್ ಎಂಬ ಕುರಿತು ಭಾರೀ ಚರ್ಚೆ ಆಗಿತ್ತು. ಈ ಮಧ್ಯೆ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಹೆಸರನ್ನೂ ತೇಲಿಬಿಡಲಾಯಿತು. ಅಂತಿಮವಾಗಿ ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರನ್ನೇ ಘೋಷಿಸಲಾಯಿತು. ಕಾಂಗ್ರೆಸ್‌ನಿಂದ ಸೀಟ್‌ ಖಚಿತ ಎಂದು ನಂಬಿದ್ದ ಉದಯ ಶೆಟ್ಟಿ ಅವರಿಗೆ ಭಾರಿ ನಿರಾಶೆಯಾಯಿತು. ಅವರ ಅಭಿಮಾನಿಗಳಿಗೆ ಆಘಾತವಾಯಿತು. ರೆಬೆಲ್ ಕಾರ್ಯಕರ್ತರು ಬೀದಿಗೆ ಇಳಿದು ಪಕ್ಷದ ಹಿರಿಯ ನಾಯಕರಿಗೆ ಧಿಕ್ಕಾರ ಕೂಗಿದರು. ಸುನೀಲ್ ಕುಮಾರ್ ಆ ಚುನಾವಣೆಯಲ್ಲಿ 42,000 ಮತಗಳ ಅಂತರದಲ್ಲಿ ಭರ್ಜರಿ ಆಗಿ ಗೆದ್ದರು. ಉದಯ ಶೆಟ್ಟಿ ಅವರು ಸದ್ಯಕ್ಕೆ ತಣ್ಣಗೆ ಆದ ಹಾಗೆ ಅನಿಸಿತು.

ಕೈಗೆ ಶೆಟ್ಟರು ರಾಜೀನಾಮೆ ?
ವಿಧಾನ ಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ ಅನ್ನುವಾಗ ಉದಯ ಕುಮಾರ್ ಶೆಟ್ಟರು ಪಕ್ಷವನ್ನು ಬಿಡುತ್ತಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಅದಕ್ಕಿಂತ ಆಘಾತಕಾರಿ ಸುದ್ದಿಯೆಂದರೆ ಕಾರ್ಕಳದ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಸಿದ್ಧರಾಗಿದ್ದಾರೆ ಎನ್ನುವುದು. ಬಿಕ್ಕಟ್ಟು ನಿರ್ವಹಣೆ ಮಾಡುವ ಸಮರ್ಥ ನಾಯಕ ಸದ್ಯಕ್ಕೆ ಕಾಂಗ್ರೆಸ್‌ ನಲ್ಲಿಲ್ಲ. ಸುನೀಲ್‌ ಕುಮಾರ್‌ ಅವರ ರಾಜಕಾರಣ, ಕಾರ್ಯಶೈಲಿ, ವರ್ಚಸ್ಸಿನ ಮುಂದೆ ಕಾಂಗ್ರೆಸ್‌ ಮಂಕಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಹಿಂದೊಮ್ಮೆ ಹಿಂದೂ ಮುಖಂಡ ಕುಡುಪುಲಾಜೆ ಮಹೇಶ್ ಶೆಟ್ಟಿ ಅವರು ಸುನೀಲ್ ಕುಮಾರ್ ಅವಿರೋಧವಾಗಿ ಆಯ್ಕೆ ಆಗಲಿ ಎಂದು ವೇದಿಕೆಯಲ್ಲಿ ಹೇಳಿದ ಮಾತು ನಿಜವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಯಾವ ಹುದ್ದೆ ?
ಪ್ರಮೋದ್‌ ಮಧ್ವರಾಜ್‌ ಅವರು ಮುಂದಿನ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಅಥವಾ ಕಾಪು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪದೇ ಪದೇ ಪಕ್ಷಾಂತರ ಮಾಡುತ್ತಿರುವ ಪ್ರಮೋದ್‌ ಅವರನ್ನು ಬಿಜೆಪಿ ಯಾವ ರೀತಿ ನೋಡಿಕೊಳ್ಳಲಿದೆ ಎನ್ನುವುದು ಇನ್ನಷ್ಟೇ ತಿಳಿಯಲಿದೆ. ಉದಯ ಶೆಟ್ಟಿ ಅವರು ಬಿಜೆಪಿ ಸೇರಿದರೆ ಯಾವ ಹುದ್ದೆ ಪಡೆಯಲಿದ್ದಾರೆ ? ಅಥವಾ ತಮ್ಮ ಉದ್ಯಮ ಕ್ಷೇತ್ರಕ್ಕೆ ಇದರಿಂದ ಏನಾದರೂ ಸಹಕಾರಿಯಾಗಲಿದೆಯೇ ? ಎನ್ನುವುದು ಸದ್ಯದ ಪ್ರಶ್ನೆ.

































































































error: Content is protected !!
Scroll to Top