ಕಾರ್ಕಳದಲ್ಲಿ ದಾಖಲೆ ಬರೆಯುತ್ತಿರುವ ಚಿಣ್ಣರ ಮೇಳ 2022

ಕಾರ್ಕಳ : ನಗರದಲ್ಲಿ ಸ್ಥಾಪನೆ ಆಗಿರುವ ಯಕ್ಷರಂಗಾಯಣದ ಮೊದಲ ಪ್ರಸ್ತುತಿಯಾದ ಮಕ್ಕಳ ಬೇಸಿಗೆ ಶಿಬಿರವು ಕೋಟಿ ಚೆನ್ನಯ ಥೀಮ್ ಪಾರ್ಕ್‌ನ ಪರಿಸರದಲ್ಲಿ ಮೆ.9 ರಂದು ಆರಂಭವಾಗಿ ಮುಂದಿನ ಮೇ 15ರವರೆಗೆ ನಡೆಯಲಿದೆ. ರಂಗ ಮಾಂತ್ರಿಕ ಜೀವನ್ ರಾಂ ಸುಳ್ಯ ಅವರು ಶಿಬಿರದ ನಿರ್ದೇಶಕರಾಗಿ ಈ ಶಿಬಿರವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.‌ ಸುನೀಲ್‌ ಕುಮಾರ್ ಅವರ ಆಶಯದಂತೆ ಅವರ ನೇರ ಮಾರ್ಗದರ್ಶನದಲ್ಲಿ ಈ ಶಿಬಿರ ಭಾರೀ ಯಶಸ್ವೀ ಆಗುತ್ತಿದೆ. ಉದ್ಘಾಟನಾ ಕಾರ್ಯಕ್ರಮದ ನಂತರ ಕುದ್ರೋಳಿ ಗಣೇಶ್ ಅವರು ಮ್ಯಾಜಿಕ್ ಕಲೆಯನ್ನು ಪರಿಚಯ ಮಾಡಿ ಕೆಲವು ಸರಳ ಮ್ಯಾಜಿಕ್ ಮಾಡುವುದನ್ನು ಹೇಳಿಕೊಟ್ಟರು. ಮುಂದೆ ಶಿವಗಿರಿ ಕಲ್ಲಡ್ಕ ಅವರು ಮಕ್ಕಳ ಕೈಯ್ಯಲ್ಲಿ ಆಕರ್ಷಕ ಪೇಪರ್ ಕ್ರಾಫ್ಟ್ ಕಲೆಯನ್ನು ಪರಿಚಯ ಮಾಡಿದರು. ಕಲಾವಿದ ಚಂದ್ರನಾಥ್ ಬಜಗೋಳಿ ಅವರು ಪೇಂಟಿಂಗ್ ಕಲೆಯನ್ನು ಪರಿಚಯ ಮಾಡಿ ಮಕ್ಕಳು ವರ್ಣ ಚಿತ್ರ ಬರೆಯಲು ಮಾರ್ಗದರ್ಶನ ಮಾಡಿದರು. ಶಿಬಿರದ ನಿರ್ದೇಶಕರಾದ ಜೀವನ್ ರಾಂ ಸುಳ್ಯ ಅವರು ಪರಿಚಯ ಮಾಡಿದ ಅಭಿನಯ ಗೀತೆಗಳು ಮತ್ತು ಗುಂಪು ಆಟಗಳು ಮಕ್ಕಳನ್ನು ಮೋಟಿವೆಟ್ ಮಾಡಿದವು.
ಖ್ಯಾತ ತರಬೇತುದಾರ ದಿನೇಶ್ ಹೊಳ್ಳ ಅವರು ಸುಂದರ ಕೈ ಬರಹದ ಪ್ರಾತ್ಯಕ್ಷಿಕೆ ಕೊಟ್ಟು ಮಕ್ಕಳಿಗೆ ಪ್ರೇರಣೆ ಕೊಟ್ಟರು. ನಂತರ ಅವರು ಬಣ್ಣಬಣ್ಣದ ಗಾಳಿಪಟವನ್ನು ಮಕ್ಕಳ ಮೂಲಕ ಮಾಡಿಸಿ ಮಕ್ಕಳಿಗೆ ಖುಷಿ ಹಂಚಿದರು. ಇನ್ನೋರ್ವ ಚಿತ್ರಕಲಾವಿದ ತಾರಾನಾಥ್ ಕೈರಂಗಳ ಅವರು ಮಕ್ಕಳಿಗೆ ನೇಚರ್ ಪೇಂಟಿಂಗ್ ಕಲಿಸಿ ಮುದ ನೀಡಿದರು ಮತ್ತು ವರ್ಲಿ ಕಲೆಯ ಪರಿಚಯ ಮಾಡಿದರು. ಕಾರ್ಕಳ ತಾಲೂಕಿನ ಬೇರೆ ಬೇರೆ ಗ್ರಾಮದಿಂದ ಬಂದಿರುವ 234 ಮಕ್ಕಳು ಉತ್ಸಾಹದ ಚಿಲುಮೆಯಾಗಿ ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಜೀವನ್ ರಾಂ ಸುಳ್ಯ ಅವರು ಈ ಶಿಬಿರದಲ್ಲಿ ಮಕ್ಕಳ ಜೊತೆ ಬೆರೆತು ಮಕ್ಕಳ ಉತ್ಸಾಹವನ್ನು ಉದ್ದೀಪನ ಮಾಡುತ್ತಿದ್ದಾರೆ. ರಾಜ್ಯಮಟ್ಟದ 20ಕ್ಕಿಂತ ಹೆಚ್ಚಿನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಈ ಶಿಬಿರದ ಯಶಸ್ಸಿಗೆ ಕಾರಣ ಆಗಿದ್ದಾರೆ. ಮೇ 15ರಂದು ಮಧ್ಯಾಹ್ನ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಶಿಬಿರದ ಒಪ್ಪಓರಣ, ಸ್ವಚ್ಛತಾ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿ ಆಗಿದೆ. ಮಕ್ಕಳು ಒಂದು ತುತ್ತು ಅನ್ನ ಕೂಡ ಅನಗತ್ಯವಾಗಿ ವ್ಯರ್ಥ ಮಾಡದೆ ಇರುವ ಸಂಕಲ್ಪ ತೊಟ್ಟಿದ್ದಾರೆ. ಹತ್ತಾರು ಆಸಕ್ತ ಸ್ವಯಂಸೇವಕರು ಶಿಬಿರದ ವ್ಯವಸ್ಥೆಗೆ ದುಡಿಯುತ್ತಿದ್ದಾರೆ.





























































































































































































































error: Content is protected !!
Scroll to Top