ಇಂದು ಯುಗಾದಿ ಹಬ್ಬ. ಹೊಸ ವರುಷದ ಸಂಭ್ರಮ. ನೂತನ ಸಂವತ್ಸರವಾಗಿ ಶುಭಕೃತ್ ಆಗಮನ. ಕಾಲಚಕ್ರ ತಿರುಗುತ್ತಲೇ ಪ್ರಕೃತಿಯಲ್ಲೂ ಚಲನಶೀಲತೆಯ ಕ್ರಿಯಾಶೀಲತೆಯ ಸೌಂದರ್ಯದ ಹೂರಣ. ಜೀವನೋತ್ಸವದ ಚೈತನ್ಯದಲ್ಲಿ ಫಲಪ್ರದಾಯಕವಾದ ಬದುಕಿಗೆ ಹೊಸ ಹೊಂಗಿರಣದ ಚೆಲುವಿನ ಈ ಯುಗಾದಿ.
ಯುಗಾದಿ ಹೆಸರೇ ಸೂಚಿಸುವಂತೆ ಯುಗದ ಅಂದರೆ ವರ್ಷದ ಹಾಗೆಯೇ ಆದಿ ಪ್ರಾರಂಭವೆನ್ನುವ ಅರ್ಥ ಸೂಚಿಸಿದರೆ ಒಟ್ಟಂದದಲ್ಲಿ ಯುಗಾದಿಯು ಪ್ರಕೃತಿಯ ಚೆಲುವು ಪ್ರಕೃತಿಯ ಮಡಿಲಲ್ಲಿ ಬೆಳಗುತ್ತಿರುವ ಹೊಸತನದೆಡೆಗೆ ಸಾಗುವ ಸಕಲ ಜೀವ ರಾಶಿಗಳಿಗೆ ಹರ್ಷದಾಯಕವಾದ ಹೊಸ ವರ್ಷದ ಆರಂಭ. ಶುಭ ಮೂಹೂರ್ತದ ಹಬ್ಬ ಇದಾಗಿದೆ. ಚಾಂದ್ರಮಾನ ಯುಗಾದಿಯೂ ಇದಾಗಿದ್ದು ಕರ್ನಾಟಕದೆಲ್ಲೆಡೆ ವಿಶೇಷವಾಗಿ ಆಚರಿಸಲ್ಪಡುವ ಹಾಗೂ ಇನ್ನಿತರ ರಾಜ್ಯಗಳಲ್ಲೂ ಸಂಭ್ರಮಗಳಿಂದ ಆಚರಿಸಲ್ಪಡುತ್ತಿದೆ. ಬೇವು ಬೆಲ್ಲವನ್ನು ಹಂಚಿಕೊಳ್ಳುವ ಪರಿ ಈ ದಿನದ ವಿಶೇಷವಾಗಿದೆ ನಮ್ಮ ಚಿಂತನೆಗಳು ಎಲ್ಲರಿಗೂ ಸಿಹಿಯಂತೆ ಹಿತವನ್ನು ನೀಡುವಂತಿರಲಿ. ಕಹಿ ಚಿಂತನೆಗಳು ಎಂದೆಂದಿಗೂ ನುಸುಳದಿರಲಿ.
ಗಾರುಡಿಗ ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದ ಸಾಲುಗಳು ನಮಗೆಲ್ಲ ಮತ್ತೆ ಮತ್ತೆ ನೆನಪಾಗುವುದು ಹೀಗೇ….
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಎಂದ ಕವಿ ಮಹನೀಯ ಬೇಂದ್ರೆ ಯವರು

ವರುಷಕ್ಕೊಂದು ಹೊಸತು ಜನ್ಮ
ಹರುಷಕ್ಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕ್ಕೆ…
ಎಂದ ಕವಿ ಸಹಜ ಜೀವನದ ಚಕ್ರವನ್ನು ಬದುಕಿನ ಗತಿಯಲ್ಲೂ ಹೊಸದೊಂದು ಸಂಭ್ರಮವಿದೆ ಎಂದು ಹೇಳಿದ್ದಾರೆ.
ಪ್ರಕೃತಿಯ ಚೆಲುವು ಎಷ್ಟು ಚೆಂದವೆಂದರೆ ತುಂಬಿ ಸೊಂಪಾಗಿ ಬೆಳೆದು ನಿಂತಿರುವ ಮಾಮರಗಳು. ನರುಗಂಪಿನ ಉದರದಲಿ ಚಿಗುರಿನ ಸವಿಯ ಸವಿದು ಹಾಡುವ ಕೋಕಿಲಗಳು
ಚಿತ್ರಕವಿ ಚಿತ್ರಿಸಿದಂತೆ
ಮಾಮರವೆಲ್ಲೋ ಕೋಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ ಎಲ್ಲಿಯದೋ
ಈ ಅನುಬಂಧ.. ಎನ್ನುವಂತೆ ಈ ಪ್ರಕೃತಿಯ ಭಾಷೆಯಲ್ಲಿ ಎಲ್ಲರನ್ನೂ ಒಂದಾಗಿಸುವ ಸಂದೇಶದ ಹಬ್ಬದ ಯುಗಾದಿ.
ಹೊಸ ಒಂದು ಚೈತನ್ಯದಾಯಕವಾದ ಯುಗದ ಆದಿಯ ಪ್ರಾರಂಭದ ಹಬ್ಬವಾಗಿ ಹಬ್ಬಹರಿದಿನಗಳು ಸಡಗರ ಸಂಭ್ರಮಗಳಿಂದ ಗರಿಗೆದರುತ್ತಾ.. ದೇವಳ ದೇವರು ಊರ ಜಾತ್ರೆಯಲ್ಲಿ ಮತ್ತೆ ಪ್ರಸನ್ನಗೊಳ್ಳುತ್ತಿದ್ದಾನೆ.
ವಸಂತಮಾಸ ಬಂದು ಪ್ರಕೃತಿಯು ತಪದಿಂದ ಹೊರಬಂದು ಹಸಿರ ನಗು ಎಲ್ಲೆಲ್ಲೂ ಸೂಸುತ್ತಿದೆ.
ಎಲ್ಲೆಲ್ಲೂ ಹಬ್ಬ ಹಬ್ಬ
ಬಂತೀಗ ಯುಗಾದಿ ಹಬ್ಬ
ಎಂದು ಹಾಡುತ್ತಾ ಸಂತೋಷಪಡುತ್ತಾ ಸಂಭ್ರಮಗಳನ್ನು ಹಂಚುತ್ತಾ ಕಷ್ಟ ಸುಖಗಳನ್ನು ಹೇಳಿ ನಿರಾಳವಾಗುವ ನಮಗೆ ಮತ್ತೆ ಹೊಸ ಬದುಕಿನ ಭಾಗ್ಯದ ಬಾಗಿಲು ತೆರೆಯಲಿ ಎಂದು ಪ್ರತಿಯೊಬ್ಬರಿಗೊಬ್ಬರೂ ಹಾರೈಸುವ ಸದಾಶಯವನು ಸಾರುವ ಸುಂದರ ಕ್ಷಣಗಳ ಹಬ್ಬ ಇದಾಗಿದೆ.
ಮನುಜ ಕುಲಕ್ಕೆ ಒಳಿತು ಬಯಸುವ ಭರತ ಭೂಮಿಯ ಸಂಸ್ಕೃತಿ ಯಲ್ಲಿ ಮಹಾಪರ್ವಗಳೇ….ಜನರ ಸಂಸ್ಕೃತಿಯ ಬಿಂಬವಾಗಿದೆ. ಪ್ರತಿಯೊಬ್ಬರ ಮುಖದಲ್ಲೂ ನಗೆಯರಳಿಸುವ ಸೌಹಾರ್ದದ ಬದುಕು ನಮ್ಮದಾಗಲಿ. ಬೇವು ಬೆಲ್ಲವ ಹಂಚುತ್ತಾ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುತ್ತಾ ಮಾನವತೆಯಿಂದ ಮಾನವೀಯ ಮೌಲ್ಯಗಳಿಂದ ಬದುಕಿನ ಸಾರ್ಥಕತೆಯನ್ನು ಸಾರೋಣ. ಇದೀಗ ದೇಶದಲ್ಲಿ ಅಲ್ಲಲ್ಲಿ ತಲೆದೋರುವ ಮತಧರ್ಮ ಚಿಂತನೆಗಳು ಮನುಕುಲದ ಹಿತವನ್ನು ಬಯಸುವಂತಿರಲಿ ಎಂದು ಹೇಳುವಲ್ಲಿ ಹಣತೆಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಕವಿತೆ ಮತ್ತೆ ಒಂದಾಗಿ ಬಾಳೋಣ ಎಂಬ ಸಂದೇಶದಿಂದ ಸಮಾಜಹಿತಕ್ಕೆ ನಾವೆಲ್ಲರೂ ಸಂಕಲ್ಪ ತೊಡಬೇಕಾದ ಕರೆಯನ್ನು ಹೀಗೆಯೇ ..ಹಾಡುತ್ತಾರೆ.
ಸುತ್ತಲೂ ಕಳೆಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ
ಬಿರುಗಾಳಿಗೂ ಹೊಯ್ಡಾಡುವ ಹಡಗನು
ಎಚ್ಚರದಲ್ಲಿ ಮುನ್ನಡಸೋಣ……
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ ಸಂಶಯಗಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ…..
ಎಂಬ ಸದಾಶಯ ಸಾರ್ವಕಾಲಿಕ ಮೌಲ್ಯಗಳನ್ನು ಸಾರುತ್ತದೆ.
ಈ ಕವಿತೆಯ ಸಾರಾರ್ಥವನು ತಿಳಿದು ನಾವು ಐಕ್ಯತೆಯನು ಎತ್ತಿ ಹಿಡಿಯೋಣ ರಾಷ್ಟ್ರೀಯ ಭಾವೈಕ್ಯತೆಯ ಭಾರತ ದೇಶದಲ್ಲಿ ಕೋಟಿಕೋಟಿ ಭಾರತೀಯರು ನಾವು ಎಂದೆಂದೂ ಒಂದಾಗಿರೋಣ ನಮ್ಮ ದೇಶವೂ ಜಗದ್ಗುರು ಭಾರತವೆನಿಸಿದೆ ಈ ಮಹಾಗುರುವಿನ ಪದತಲದಲ್ಲಿ ನಾವುಗಳು ಈ ಮಣ್ಣಿನ ಶ್ರೇಷ್ಠ ಸಂಸ್ಕೃತಿಯ ಸತ್ವವನ್ನು ನಮ್ಮ ಹಿತವಾದ ನಡೆ ನುಡಿಗಳಿಂದ ಜಗದಗಲ ಸಾರೋಣ… ಎಲ್ಲರಿಗೂ ಶುಭಕೃತ್ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು.

ಗಣೇಶ್ ಜಾಲ್ಸೂರು
ಶಿಕ್ಷಕರು, ಕಾರ್ಕಳ










































