ನಿಟ್ಟೆ : ಗ್ರಾಮೀಣ ಪ್ರದೇಶವಾಗಿರುವ ನಿಟ್ಟೆಯಲ್ಲಿ ಅಂದಿನ ಕಾಲದಲ್ಲೇ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳು ದೂರದೂರುಗಳಿಂದ ಶಿಕ್ಷಣವನ್ನು ಅರಸಿ ಕಾರ್ಕಳಕ್ಕೆ ಬರುವಂತಾಗಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಮೂಲಕ ನಿಟ್ಟೆ ಸಂಸ್ಥೆ ಸಮಾಜದ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಫೆ. 7ರಂದು ನಿಟ್ಟೆ ಪ್ರಥಮ ದರ್ಜೆ ಕಾಲೇಜು ಮತ್ತು ನಿಟ್ಟೆ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣವರೆಗೆ ವಿದ್ಯಾರ್ಥಿಗಳಿಗೆ ಸುಲಭವಾಗಿ, ಗುಣಮಟ್ಟದ ಶಿಕ್ಷಣ ಒದಗಿಸುವುದು ಸರಕಾರ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಗ್ರಾಮದ ಅಭಿವೃದ್ದಿಯೂ ಸಂಸ್ಥೆಯ ಆಶಯ- ವಿನಯ್ ಹೆಗ್ಡೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕುಲಪತಿ ವಿನಯ್ ಹೆಗ್ಡೆ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಬೇಕು. ಅಧ್ಯಾಪಕರು ಸಂತೃಪ್ತ ಜೀವನ ಸಾಗಿಸಬೇಕು. ಇದರೊಂದಿಗೆ ಗ್ರಾಮದ ಅಭಿವೃದ್ಧಿಯೂ ಆಗಬೇಕೆನ್ನುವುದು ನಿಟ್ಟೆ ಸಂಸ್ಥೆಯ ಆಶಯ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದೆ. ವಿದ್ಯಾರ್ಥಿಗಳ ನಡತೆಯಿಂದ ಅವರ ಸಂಸ್ಥೆಯ ಪರಿಚಯವಾಗುವುದು. ನಿಟ್ಟೆಯನ್ನು ದೇಶದಲ್ಲೇ ಮಾದರಿ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಸರಕಾರದ ಸಹಕಾರ ಬೇಕೆಂದರು.
ಸುನಿಲ್ ಕುಮಾರ್ ಸಿಎಂ ಆಗಲಿ
ಸಚಿವ ಸುನಿಲ್ ಕುಮಾರ್ ಕಾರ್ಕಳವನ್ನು ಮಾದರಿ ಕ್ಷೇತ್ರವಾಗಿ ಮಾಡುವಿರೆಂಬ ಅಚಲ ನಂಬಿಕೆಯಿದೆ. ಸಚಿವ ಸುನಿಲ್ ಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ವಿನಯ್ ಹೆಗ್ಡೆ ಇದೇ ಸಂದರ್ಭದಲ್ಲಿ ಹಾರೈಸಿದರು.
ನಿಟ್ಟೆ ವಿದ್ಯಾ ಸಂಸ್ಥೆಗಳ ಉಪ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ಪ್ರೊ. ಕುಲಪತಿ ವಿಶಾಲ್ ಹೆಗ್ಡೆ, ಡಾ. ಎಮ್. ಎಸ್. ಮೂಡಿತ್ತಾಯ, ಸಂಸ್ಥೆಯ ರಿಜಿಸ್ಟ್ರಾರ್ ಯೋಗೀಶ್ ಹೆಗ್ಡೆ, ನಿಟ್ಟೆ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಲೂಣ್ಕರ್, ನಿಟ್ಟೆ ವಿದ್ಯಾಸಂಸ್ಥೆಯ ಟ್ರಸ್ಟಿ ಗುರುಪ್ರಸಾದ್ ಅಡ್ಯಂತಾಯ, ಬೆಂಗಳೂರು ನಿಟ್ಟೆ ಕ್ಯಾಂಪಸ್ ನ ಆಡಳಿತಾಧಿಕಾರಿ ರೋಹಿತ್ ಪೂಂಜಾ, ಬೆಂಗಳೂರು ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಪ್ರಾಂಶುಪಾಲ ಪ್ರೊ. ನಾಗರಾಜ್, ಡಾ. ರವೀಂದ್ರನಾಥ್ ಶೆಟ್ಟಿ ಉಪಸ್ಥಿತರಿದ್ದರು. ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ. ಸ್ವಾಗತಿಸಿ, ಎನ್.ಎಸ್.ಎ.ಎಮ್. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಭವಾನಿ ಶೆಟ್ಟಿ ವಂದಿಸಿದರು.
