Wednesday, January 19, 2022
spot_img
Homeಸ್ಥಳೀಯ ಸುದ್ದಿಶಿಕ್ಷಣದಲ್ಲಿ ವಿನೂತನ ಪರಿಕಲ್ಪನೆ "ಅಕ್ಕನ ಮನೆ ಪಾಠ"

ಶಿಕ್ಷಣದಲ್ಲಿ ವಿನೂತನ ಪರಿಕಲ್ಪನೆ “ಅಕ್ಕನ ಮನೆ ಪಾಠ”

ಕಾರ್ಕಳದ ಈ ನವೀನ ಪ್ರಯತ್ನ ಶೈಕ್ಷಣಿಕ ವಲಯಕ್ಕೆ ಪ್ರೇರಣೆಯಾಗಲಿ

ಕಾರ್ಕಳ ತಾಲೂಕು ಕೆರ್ವಾಶೆ ಮಲೆನಾಡ ತಪ್ಪಲಿನಲ್ಲಿರುವ ಪುಟ್ಟ ಗ್ರಾಮ. ಇಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಿದೆ. ಈ ಶಾಲೆ ಕಳೆದ ಕೆಲವು ವರ್ಷಗಳಿಂದ ಹೊಸತನವನ್ನು ಅಳವಡಿಸಿಕೊಂಡು ಮಕ್ಕಳನ್ನು ಆಕರ್ಷಿಸತೊಡಗಿದೆ. ಕೋವಿಡ್‌ ಕಾರಣದಿಂದ ಆನ್‍ಲೈನ್ ತರಗತಿಗಳು ನಡೆಯುತ್ತಿದ್ದರೂ ಈ ಶಾಲಾ ಪರಿಸರದಲ್ಲಿ ನೆಟ್‌ ವರ್ಕ್‌ ಸಮಸ್ಯೆ ಮತ್ತು ಕೆಲವೊಂದು ಕುಟುಂಬಗಳಲ್ಲಿ ಮೊಬೈಲ್‌ ಇಲ್ಲದ ಕಾರಣ ಇಲ್ಲಿನ ಶಿಕ್ಷಕರಿಗೆ ಹೊಸದೊಂದು ಯೋಜನೆಗೆ ಮುಂದಾದರು. ಹೇಗಾದರೂ ಮಾಡಿ ಮಕ್ಕಳ ಕಲಿಕೆಗೆ ನೆರವಾಗಬೇಕೆಂಬ ಛಲವಿಟ್ಟುಕೊಂಡು ವಿನೂತನ ಪ್ರಯತ್ನ “ಅಕ್ಕನ ಮನೆ ಪಾಠ” ಪ್ರಾರಂಭಿಸಿದರು.
ಪದವಿ ಪಡೆದಿರುವ ಬೋಧನೆಯಲ್ಲಿ ಆಸಕ್ತಿ ಇರುವ 10 ಜನ ಮಹಿಳಾ ಪೋಷಕರು/ಪಾಲಕರನ್ನು ಗುರುತಿಸಿ, ಅವರ ಮನೆಯ ಮಕ್ಕಳೊಂದಿಗೆ, ಅವರ ಮನೆಯ ಆಸುಪಾಸಿನಲ್ಲಿದ್ದ ಮಕ್ಕಳನ್ನು 5 ಕ್ಕಿಂತ ಮಕ್ಕಳ ಸಂಖ್ಯೆ ಹೆಚ್ಚಿಲ್ಲದಂತೆ 17 ಗುಂಪುಗಳನ್ನು ಮಾಡಿದರು. 1,2,3 ನೇ ತರಗತಿ ಮಕ್ಕಳಿಗೆ ಪೂರ್ವಾಹ್ನ 9.30 ರಿಂದ 12.30. ಅದೇ 4,5ನೇ ತರಗತಿ ಮಕ್ಕಳಿಗೆ ಅಪರಾಹ್ನ 2.00 ರಿಂದ 5.00 ರವರೆಗೆ ಪ್ರತೀದಿನ, ಪ್ರತೀ ಗುಂಪಿಗೆ 3 ಗಂಟೆ ಅವಧಿ ಕೋವಿಡ್-19 ನಿಯಮಗಳನ್ನು ಪಾಲಿಸುತ್ತಾ, ಮಕ್ಕಳಿಗೆ ಕಲಿಕಾ ಬೋಧನಾ ಪ್ರಕ್ರಿಯೆ ನಿರಂತರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು.

ಕಲಿಕೆಯಲ್ಲಿ ಆಸಕ್ತಿ

ಅಕ್ಕನೇ ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಸುಗುಮಕಾರಳಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ “ಅಕ್ಕನ ಮನೆ ಪಾಠ” ಕೇಂದ್ರದ 100 ಮೀ. ವ್ಯಾಪ್ತಿಯಲ್ಲಿ ಬರುವ ಮಕ್ಕಳೇ ಭಾಗವಹಿಸುತ್ತಾರೆ. ಯಾವುದೇ ಭಯವಿಲ್ಲ, ಯಾವಾಗಲೂ ಮನೆಯಂಗಳದಲ್ಲಿ ಓಡಾಡುವ ಅಕ್ಕನ ಪ್ರೀತಿಯ ಮಕ್ಕಳೇ ಆಗಿದ್ದಾರೆ. ಅಕ್ಕ ತನ್ನ ಮಕ್ಕಳಿಗೆ ಕಲಿಸುವ ಜೊತೆಗೆ ನೆರೆಮನೆಯ ಮಕ್ಕಳಿಗೂ ಕಲಿಸುವ ಕೆಲಸವನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದಾರೆ. ಮಕ್ಕಳಿಗೂ ಕೂಡ ತಾವು ದಿನ ನಿತ್ಯ ನೋಡುವ ಅಕ್ಕನೇ ಬೋಧಿಸುವುದರಿಂದ ಕಲಿಕೆಯಲ್ಲಿ ಬಹಳ ಆಸಕ್ತಿಯಿಂದ ತೊಡಗಿಸಿಕೊಂಡಿರುತ್ತಾರೆ. ಅಕ್ಕನಿಗೂ ಖುಷಿ ಇದೆ. ಮುಖ್ಯವಾಗಿ ಮಕ್ಕಳಿಗೂ ದೂರ ನಡೆದುಕೊಂಡು ಹೋಗುವ ಅಗತ್ಯವಿಲ್ಲ. ಕೂಗಳತೆ ದೂರದಲ್ಲಿಯೇ ಚಿರಪರಿಚಿತ ಮಕ್ಕಳು. ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಪೋಷಕರು ಕೂಡಾ ಆಸಕ್ತಿಯಿಂದ ಭಾಗವಹಿಸಲು ನೆರವಾಗುತ್ತಿದ್ದಾರೆ.

ಶಿಕ್ಷಕರು ಪ್ರತೀ ತಂಡಗಳಿಗೆ ಎರಡು ದಿನಗಳಿಗೊಮ್ಮೆ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಪರಿಶೀಲನೆ ಮಾಡುತ್ತಾರೆ. ಅಕ್ಕನಿಗೆ ಮತ್ತು ಮಕ್ಕಳಿಗೆ ಸೂಕ್ತ ಹಿಮ್ಮಾಹಿತಿ ನೀಡಲಾಗುತ್ತಿದೆ. 2021 ಜೂ. 15ರಂದು ಪ್ರಾರಂಭವಾದ ಈ ಪರಿಕಲ್ಪನೆ ಇದೀಗ ಪರಿಣಾಮಕಾರಿಯಾಗಿ ಯಶಸ್ವಿಯಾಗಿದೆ.

ಡಿಎಸ್‌ಇಆರ್‌ಟಿ ವತಿಯಿಂದ ನಿರ್ದೇಶಿಸಲಾದ ಅಭ್ಯಾಸದ ಹಾಳೆಗಳ ಬಗ್ಗೆ ಅಕ್ಕನಿಗೆ ಮಾಹಿತಿ ನೀಡಿ, ಈ ಮೂಲಕ ಮಕ್ಕಳ ಕಲಿಕೆಯನ್ನು ಉತ್ತೇಜಿಸುವುದರ ಜೊತೆಗೆ ಭೇಟಿ ಸಂದರ್ಭದಲ್ಲಿ ಪರಿಶೀಲಿಸಿ, ಮಾರ್ಗದರ್ಶನ ನೀಡಲಾಗುತ್ತಿದೆ. ಅಲ್ಲದೆ 15 ದಿನಗಳಿಗೊಮ್ಮೆ ಮೌಲ್ಯಮಾಪನವನ್ನು ನಡೆಸಿ ಸೂಕ್ತ ಪ್ರಗತಿ ದಾಖಲಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ನಲಿ-ಕಲಿ ಮಕ್ಕಳ ಕಲಿಕೆಗೆ ಸಂಬಂಧಪಟ್ಟ ಕಾರ್ಡುಗಳನ್ನು ಇತರ ಪರಿಕರಗಳನ್ನು ಕಲಿಕಾ ಕೇಂದ್ರದಲ್ಲಿ ಬಳಸಲಾಗುತ್ತಿದೆ. ಸುಜಯ, ಶಂಕರಿ, ಪ್ರಮೋದಿನಿ, ರೂಪಾ ನಾಯ್ಕ, ಸ್ವಾತಿ ವಿ. ನಾಯಕ್, ಸುಮನಾ ನಾಯಕ್, ಶ್ವೇತಾ ಗುಡಿಗಾರ್, ರಂಜಿತಾ ಪೂಜಾರಿ, ತಸ್ವೀನ್, ಸರಿತಾ ಅಕ್ಕಂದಿರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅನುಕೂಲತೆ
ಪೋಷಕರ ಮನದಲ್ಲಿ ಸಂತೃಪ್ತಿಯ ಭಾವ ತುಂಬಿದೆ.
ಈ ವಿನೂತನ ಚಟುವಟಿಕೆಯಿಂದಾಗಿ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿಲ್ಲದ ಹಳ್ಳಿ ಪರಿಸರಕ್ಕೆ ತುಂಬಾ ಅನುಕೂಲವಾಯಿತು.
ಮಕ್ಕಳ ಅಪೂರ್ಣಗೊಂಡಿದ್ದ ಕಲಿಕಾ ಸಾಮರ್ಥ್ಯ ಪರಿಪೂರ್ಣಗೊಳಿಸಲು ಸಾಧ್ಯವಾಯಿತು.
ಅಕ್ಕನ ಮನೆಯಂಗಳದ ಮಕ್ಕಳೇ ಆಗಿರುವುದರಿಂದ ಕೋವಿಡ್-19 ಭಯವಿಲ್ಲ.
ಮುಖಾ-ಮುಖಿ ತರಗತಿ ಆಗಿರುವುದರಿಂದ ಮಕ್ಕಳ ಕಲಿಕೆಗೆ ಹೆಚ್ಚು ಉತ್ತೇಜನ ದೊರೆಯುತ್ತದೆ.
ಪೋಷಕರನ್ನು/ಪಾಲಕರನ್ನು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ತೊಡಗಿಸಿಕೊಂಡಂತಾಗಿದೆ.
“ಅಕ್ಕನ ಮನೆ ಪಾಠ” ಕಾರ್ಯಕ್ರಮದ ಅಕ್ಕಂದಿರು ಹೆಚ್ಚಿನವರು ಪದವೀಧರರಾಗಿದ್ದು, ಸ್ವಯಂ
ಸ್ಫೂರ್ತಿಯಿಂದ ಬೋಧನಾ ಪ್ರಕ್ರಿಯೆಯಲ್ಲಿ ಆಸಕ್ತಿವುಳ್ಳವರಾಗಿದ್ದಾರೆ.
ಹೆಚ್ಚಿನ ಕೇಂದ್ರಗಳನ್ನು ಖಾಲಿ ಮನೆಗಳಲ್ಲಿ, ನಿರ್ಮಾಣ ಹಂತದ ಮನೆಗಳಲ್ಲೇ ನಡೆಸಲಾಗುತ್ತಿದೆ.
ಶಿಕ್ಷಕರು ನಿರಂತರವಾಗಿ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಾ ಮೇಲುಸ್ತುವಾರಿ ನಡೆಸುತ್ತಾ, ಮೌಲ್ಯಮಾಪನಾ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಅಕ್ಕಂದಿರ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯನ್ನು ಗಮನಿಸಬಹುದು.
ಬೋಧನಾ ಪ್ರಕ್ರಿಯೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಹೇಗೆ ಪರಿಣಾಮಕಾರಿಗೊಳಿಸಬಹುದು ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆ “ಅಕ್ಕನ ಮನೆ ಪಾಠ”
ಪೋಷಕರು ಮತ್ತು ಎಸ್.ಡಿ.ಎಂ.ಸಿ. ಪಾತ್ರ ಅಪಾರವಾಗಿದೆ.

ಡಿ.ವಿ.ಜಿ.ಯವರ ಕಗ್ಗದ ನುಡಿಯಂತೆ ಶೈಕ್ಷಣಿಕವಾಗಿ ಹೊಸ ಚಿಂತನೆಯ ಪರಿಕಲ್ಪನೆಯೇ ನಮ್ಮ “ಅಕ್ಕನ ಮನೆ ಪಾಠ”. ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಆತಂಕ ಎದುರಾದ ಸಂದರ್ಭದಲ್ಲಿ ಮಕ್ಕಳ ವಿದ್ಯಾರ್ಜನೆ ಕುಂಠಿತವಾಗಬಾರದು ಎನ್ನುವ ತುಡಿತದಿಂದ ಮಾಡಿದ ಈ ವಿನೂತನ ಪರಿಕಲ್ಪನೆ ಅತ್ಯಂತ ಯಶಸ್ವಿಯಾಗಿರುವುದು ಅತೀವ ಸಂತಸ ತಂದಿದೆ. ಕೊರೋನಾದ ಛಾಯೆ ನಡುವೆಯೂ ಮಕ್ಕಳೆಲ್ಲರೂ ಗುಣಾತ್ಮಕ ಶಿಕ್ಷಣವನ್ನು ಪಡೆದಿದ್ದಾರೆ ಎನ್ನುವುದಕ್ಕೆ ಹೆಮ್ಮೆಯೆನಿಸುತ್ತದೆ. ಇದಕ್ಕೆ ಕಾರಣವಾದ “ಅಕ್ಕನ ಮನೆ ಪಾಠ” ಇತರರಿಗೂ ಪ್ರೇರಣೆಯಾದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಈ ಒಂದು ಕಾರ್ಯಕ್ರಮದ ಯಶಸ್ವಿಗೆ ಬೆನ್ನೆಲುಬಾಗಿ ನಿಂತ ಅಕ್ಕಂದಿರಿಗೆ, ಹಿರಿಯ ಸಹಶಿಕ್ಷಕ ಉಮೇಶ್ ಕೆ.ಎಸ್., ಪೋಷಕರಿಗೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆಗಳು.

ಸಂಜೀವ ದೇವಾಡಿಗ
ಮುಖ್ಯ ಶಿಕ್ಷಕರು
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ
9108749034

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!