Wednesday, January 26, 2022
spot_img
Homeಸಂಪಾದಕೀಯಸಂಪಾದಕೀಯ: ಯಡಿಯೂರಪ್ಪ ನಿರ್ಗಮನ ಅನಿವಾರ್ಯವಾಗಿತ್ತೆ ?

ಸಂಪಾದಕೀಯ: ಯಡಿಯೂರಪ್ಪ ನಿರ್ಗಮನ ಅನಿವಾರ್ಯವಾಗಿತ್ತೆ ?

ಬಿಜೆಪಿಯ ಮಾಸ್ ಲೀಡರ್, ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಪಕ್ಷದ ಪಾಲಿಸಿ ಪ್ರಕಾರ ಅವರು ಇನ್ನು ಯಾವತ್ತೂ ಮುಖ್ಯಮಂತ್ರಿ ಆಗುವಂತಿಲ್ಲ. ಆದರೆ, ಪದಚ್ಯುತಿ ಮತ್ತು ಪದತ್ಯಾಗ ಗೊಂದಲ ಹಾಗೆಯೇ ಮುಂದುವರೆಯಲಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರಕಾರ ವಿಶೇಷವಾಗಿ ಮೋದಿ-ಶಾ ಜೋಡಿ ಹಿರಿಯರಾದ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜಸ್ವಂತ್ ಸಿಂಗ್ ಅವರನ್ನು ಅಧಿಕಾರದಿಂದ ದೂರ ಇಡಲು ಆರಿಸಿಕೊಂಡದ್ದು 75 ವರ್ಷಗಳ ಸೂತ್ರ. ವಯಸ್ಸಾದವರು ಕಿರಿಯರಿಗೆ ಅಧಿಕಾರವನ್ನು ಬಿಟ್ಟುಕೊಡಬೇಕು ಅನ್ನುವುದು ಉತ್ತಮ ಆಶಯ ಎನ್ನಲು ಅಡ್ಡಿಯಿಲ್ಲ. ಆದರೆ ಅದೇ ಸೂತ್ರಕ್ಕೆ ಯಡಿಯೂರಪ್ಪ ಅಂಥವರು ಬಲಿಪಶು ಆಗ್ತಾರೆ ಅನ್ನುವಾಗ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಬಹಳ ನೋವಾಗುತ್ತದೆ.

ಕರ್ನಾಟಕದಲ್ಲಿ ಬಿಜೆಪಿಯ ಬೇರೆ ಯಾವ ನಾಯಕನೂ ಯಡಿಯೂರಪ್ಪ ಅವರ ಮಟ್ಟಕ್ಕೆ ಬೆಳೆದಿಲ್ಲ ಅನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇಡೀ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕರ್ನಾಟಕದಲ್ಲಿ ಬಿಜೆಪಿಯ ಬಾವುಟ ಹಾರಿಸಲು ಅವರ ಕೊಡುಗೆ ಅತೀ ದೊಡ್ಡದು. ಈ ವಯಸ್ಸಿನಲ್ಲಿ ಅವರ ಓಡಾಟ, ಸಂಘಟನಾ ಶಕ್ತಿ, ಭಾಷಣ, ಆಡಳಿತದ ಅನುಭವ, ಉತ್ಸಾಹ ಒಂದಿಷ್ಟೂ ಕಳೆಗುಂದಿದ ಲಕ್ಷಣವೇ ಇಲ್ಲ. ಇವತ್ತಿಗೂ ಅವರು ಬಿಜೆಪಿಯ ಗೆಲ್ಲುವ, ಗೆಲ್ಲಿಸುವ ಕುದುರೆ. ಅವರಿಗಾಗಿ ಇಡೀ ವೀರಶೈವ ಸಮುದಾಯ ಬಿಜೆಪಿಯ ಪರವಾಗಿ ನಿಂತಿದೆ ಅಂದರೆ ಉತ್ಪ್ರೇಕ್ಷೆಯಲ್ಲ. 60-65 ಹಾಲಿ ಎಂಎಲ್ಎಗಳು ಈಗಲೂ ಅವರ ಬೆನ್ನಿಗಿರುವುದು ಅಷ್ಟೇ ಸತ್ಯ.

ಲಾಕ್‌ ಡೌನ್‌- ನೆರೆ
ಜಲಪ್ರಕೋಪಗಳ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ರಾಜ್ಯ ಸುತ್ತಿದ್ದು ಯಡಿಯೂರಪ್ಪ ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಬಿಜೆಪಿಗೆ ಬಹುಮತ ಇಲ್ಲದ ಸಂದರ್ಭದಲ್ಲಿ ಕೂಡ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಕಾಂಗ್ರೆಸ್ ಪಕ್ಷವನ್ನು ಆಪರೇಶನ್ ಕಮಲ ಮೂಲಕ ಸರಕಾರದ ಸಂಖ್ಯಾಬಲ ವೃದ್ಧಿ ಮಾಡಿ ಸ್ಥಿರ ಸರ್ಕಾರ ರಚನೆ ಮಾಡಿದ ನಿರ್ಧಾರವನ್ನು ಮೆಚ್ಚಲೇ ಬೇಕು. ಹಾಗೆ ಪಕ್ಷಕ್ಕೆ ಬಂದ ಡಾಕ್ಟರ್ ಸುಧಾಕರ್, ಸೋಮಶೇಖರ್ ಮೊದಲಾದವರು ಉತ್ತಮ ಮಂತ್ರಿಗಳಾಗಿ ಹೆಸರು ಮಾಡಿ ಸರಕಾರದ ಗುಡ್ ವಿಲ್ ಜಾಸ್ತಿ ಮಾಡ್ತಾ ಇದ್ದಾರೆ. ಮೂಲ ಬಿಜೆಪಿ ಮತ್ತು ವಲಸಿಗರು ಬಡಿದಾಡಿಕೊಳ್ಳದಂತೆ ಬ್ಯಾಲೆನ್ಸ್ ಮಾಡುವುದು ಅವರಿಗೆ ಮಾತ್ರ ಸಾಧ್ಯ. ಸಿಟ್ಟಿನ ಜ್ವಾಲಾಮುಖಿ ಆಗಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ತಾಳ್ಮೆಯ ಪ್ರತಿಮೂರ್ತಿ ಆಗಿ ಬದಲಾದದ್ದು ಅವರ ಅನುಭವದ ಬಲದಿಂದ. ಯತ್ನಾಳ್, ಈಶ್ವರಪ್ಪ, ವಿಶ್ವನಾಥ್ ಮೊದಲಾದವರು ಗುಟುರು ಹಾಕುತ್ತಾ ಹೋದಾಗಲೂ ಒಂದಿಷ್ಟು ತಾಳ್ಮೆ ಕಳೆದುಕೊಳ್ಳದೆ ತನ್ನಷ್ಟಕ್ಕೆ ಕೆಲಸ ಮಾಡುತ್ತಾ ಹೋದವರು ಅವರು. ಲಾಕ್ ಡೌನ್ ಅವಧಿಯಲ್ಲಿ ಕೂಡ ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ಅವರು ಕೈಗೊಂಡ ನಿರ್ಧಾರಗಳು ಸರಿಯಾಗಿಯೇ ಇದ್ದವು. ಅಂತಹ ಯಡಿಯೂರಪ್ಪ ಕಣ್ಣೀರು ಹಾಕುತ್ತಾ ನಿರ್ಗಮಿಸಿದರು ಅನ್ನುವುದು ಬಿಜೆಪಿಯ ಪಾಲಿಗೆ ಶುಭ ಶಕುನ ಖಂಡಿತ ಅಲ್ಲ. ನಾನು ಸಂತೋಷವಾಗಿ ಅಧಿಕಾರ ಬಿಟ್ಟು ಹೋಗ್ತಾ ಇದ್ದೇನೆ ಎಂದು ಯಡಿಯೂರಪ್ಪ ಹೇಳಿದರೂ ಅವರ ಕಣ್ಣೀರು ಸುಳ್ಳು ಹೇಳುವುದಿಲ್ಲ.

ಮಕ್ಕಳಿಗಾಗಿ ಮೌನ
ಪಕ್ಷದ ಪಾಲಿಸಿ ಏನೇ ಇರಲಿ. ಪಕ್ಷದ ವರ್ಚಸ್ಸು ಹೆಚ್ಚಿಸಲು ಯಡಿಯೂರಪ್ಪ ಇನ್ನೂ ಒಂದೆರಡು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಮುಂದುವರೆಯಬೇಕಿತ್ತು ಎಂದು ಪಕ್ಷದ ಬಹುತೇಕ ಕಾರ್ಯಕರ್ತರ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಆದರೆ ಹೈಕಮಾಂಡ್ ವಿರುದ್ಧ ಎದುರು ಬಂದು ಯಾರೂ ಮಾತಾಡುವುದಿಲ್ಲ. ಯಡಿಯೂರಪ್ಪ ಅವರಿಗೂ ತನ್ನ ಇಬ್ಬರು ಗಂಡು ಮಕ್ಕಳ ರಾಜಕೀಯ ಭವಿಷ್ಯ ಕಟ್ಟುವ ಕನಸು. ಹೀಗಾಗಿ ಮೌನಕ್ಕೆ ಶರಣಾಗಿದ್ದಾರೆ. ಮೊನ್ನೆ ಯಡ್ಡಿಯೂರಪ್ಪ ಬೆನ್ನಿಗೆ ನಿಂತ ಒಂದಿಷ್ಟು ಮಠಾಧಿಪತಿಗಳು ಸದ್ಯ ಮಾತಾಡುವುದಿಲ್ಲ. ಹೊಸ ಸರಕಾರ, ಹೊಸ ಸಚಿವ ಸಂಪುಟ ಮುನ್ನಡೆಸುವುದು ಯಡಿಯೂರಪ್ಪ ಅವರನ್ನು ಹೊರಗಿಟ್ಟು ಹೇಳಿದಷ್ಟು ಸುಲಭವಲ್ಲ. ಪಕ್ಷ ಸಂಘಟನೆ ಮಾಡ್ತೇನೆ ಎಂದು ಯಡಿಯೂರಪ್ಪ ಹೇಳಿದರೂ ತನ್ನ ಅಧಿಕಾರವನ್ನು ಕಸಿದುಕೊಂಡ ನೋವನ್ನು ಸ್ವಾಭಿಮಾನಿಯಾದ ಅವರು ಅಷ್ಟು ಸುಲಭವಾಗಿ ಮರೆಯುತ್ತಾರೆಯೇ ?

ಮುಖ್ಯಮಂತ್ರಿ ಆಯ್ಕೆ ಯಾರಿಂದ
ಕರ್ನಾಟಕದ ರಾಜಕೀಯದ ಚಹರೆಗಳು ಉತ್ತರ ಭಾರತದ ಮಂದಿಗೆ ಅಷ್ಟು ಬೇಗ ಅರ್ಥ ಆಗೋದಿಲ್ಲ. ಇಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ, ವಾಲ್ಮೀಕಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ, ಮೇಲ್ವರ್ಗ ಸಮೀಕರಣದ ಮೇಲೆ ಹೆಚ್ಚು ಅಧಿಕಾರ ಹಂಚಿಕೆ ಆಗುತ್ತದೆ. ಹೈಕಮಾಂಡ್ ಕೈಗೊಂಬೆ ಸರಕಾರಗಳನ್ನು ಹಿಂದೆ ಹಲವು ಬಾರಿ ಕನ್ನಡಿಗರು ಹೆಡೆಮುರಿ ಕಟ್ಟಿ ಸ್ವಾಭಿಮಾನ ಮೆರೆದಿದ್ದಾರೆ. ಅಂತಿಮವಾಗಿ ರಾಜ್ಯದ ಮುಖ್ಯಮಂತ್ರಿಯನ್ನು ಶಾಸಕರು ಆರಿಸಬೇಕೊ ಅಥವ ಹೈಕಮಾಂಡ್ ಆರಿಸಬೇಕೊ ಅನ್ನುವ ಪ್ರಶ್ನೆಗೆ ಕೂಡ ಉತ್ತರ ಸಿಕ್ಕಿಲ್ಲ. ಈ ಪರಿಸ್ಥಿತಿಯಲ್ಲ ಯಡಿಯೂರಪ್ಪ ನಿರ್ಗಮನ ಅನಿವಾರ್ಯ ಆಗಿತ್ತೇ ಎಂಬ ಬಿಜೆಪಿಯವರದ್ದು ಮಾತ್ರವಲ್ಲ ಬಿಜೆಪಿಯನ್ನು ವಿರೋಧಿಸುವವರದ್ದೂ ಹೌದು. ಏನಿದ್ದರೂ ರಾಜ್ಯದಲ್ಲಿ ಈ ವಾರ ನಡೆದ ವಿದ್ಯಮಾನಗಳು ಬಿಜೆಪಿಗೆ ಭವಿಷ್ಯದಲ್ಲಿ ವರ್ಚಸ್ಸು ತಂದು ಕೊಡುವುದಿಲ್ಲ ಅನ್ನುವುದು ಪಕ್ಷದ ಕಟ್ಟಾ ಕಾರ್ಯಕರ್ತರಿಗೆ ಅರ್ಥವಾಗಿದೆ. ಮುಂದೆ ಏನಾಗಬಹುದು ಕಾದು ನೋಡೋಣ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!