ಸಂಪಾದಕೀಯ : ನಮಗೇಕೆ ಇದು ಸಾಧ್ಯವಾಗುವುದಿಲ್ಲ?

ಉತ್ತರ ಕೊರಿಯಾದಲ್ಲಿ ಕೂಡ ಕೋರೊನಾ ನಮ್ಮ ಹಾಗೆ ತೊಂದರೆ ಕೊಟ್ಟಿತ್ತು. ಆದರೆ ಅವರು ಈ ವರೆಗೆ ಲಾಕ್ ಡೌನ್ ಮಾಡಿಲ್ಲ! ಯಾವ ಕಾರ್ಖಾನೆ ಕೂಡ ಮುಚ್ಚಿಲ್ಲ! ಜನರು ನಿರಾತಂಕವಾಗಿ ತಮ್ಮ ಕೆಲ್ಸ ಮಾಡಿಕೊಂಡು ಇದ್ದಾರೆ! ಶಾಲೆ ಕಾಲೇಜುಗಳು ಬಂದ್ ಆಗಿಲ್ಲ! ಯಾವ ಕರ್ಫ್ಯೂ ಕೂಡ ಹೇರಿಲ್ಲ! ಆಶ್ಚರ್ಯ ಆಗ್ತಾ ಇದೆಯಾ?

ಮುಂದೆ ಓದಿ.

ಅಲ್ಲಿ ಕೊರೋನಾ ಮೊದಲ ಕೇಸ್ ಬರಲು ಆರಂಭವಾದ ಕೂಡಲೇ ಸರಕಾರ ಎಚ್ಚೆತ್ತುಕೊಂಡಿತು. ಜನರನ್ನು ತುಂಬಾ ನಾಜೂಕಾಗಿ ಎಜುಕೇಟ್ ಮಾಡಿತು. ಎಲ್ಲಾ ಪತ್ರಿಕೆ, ಟಿವಿ ಚಾನೆಲ್ ಮೂಲಕ ಸಾಂಕ್ರಾಮಿಕ ರೋಗದ ಭೀಕರತೆ ಬಗ್ಗೆ ಮನವರಿಕೆ ಮಾಡುವ ಕಾರ್ಯಕ್ರಮ ಮೊದಲು ಪ್ರಸಾರ ಆಯಿತು. ಮನೆಯಲ್ಲಿ ಕೂಡ ಮಾಸ್ಕ್ ಧರಿಸಿ ಎಂದು ವಿನಂತಿ ಮಾಡಲಾಯಿತು. ಸ್ಯಾನಿಟೈಸರ್ ಬಳಕೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಸಾಮಾಜಿಕ ಅಂತರವನ್ನು ಪಾಲಿಸುವ ಅಗತ್ಯವನ್ನು ಸಾರ್ವಜನಿಕರಿಗೆ ಒತ್ತಿ ಹೇಳಲಾಯಿತು. ಬಹಳ ಮುಖ್ಯವಾಗಿ ಕೊರೋನಾ ಸಂತ್ರಸ್ತರನ್ನು ಕೀಳಾಗಿ ನೋಡದೆ ಅವರಾಗಿ ತಮಗೆ ಸೋಂಕು ಇದೆ ಎಂದು ಘೋಷಣೆ ಮಾಡುವ ವಾತಾವರಣವನ್ನು ನಿರ್ಮಿಸಲಾಯಿತು.

ಕೊರೋನಾ ಶಾಪ ಅಲ್ಲ, ಅದನ್ನು ಗೆಲ್ಲಬಹುದು ಎಂಬ ಭರವಸೆಯನ್ನು ಮಾಧ್ಯಮಗಳ ಮೂಲಕ ಮೂಡಿಸಲಾಯಿತು. ಕೊರೋನ ಬಂದ್ರೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ವರ್ತಿಸುವ ಅಗತ್ಯ ಇಲ್ಲ, ಅದಕ್ಕೆ ಚಿಕಿತ್ಸೆ ಇದೆ ಅನ್ನುವುದನ್ನು ಜನರಿಗೆ ಸರಿಯಾಗಿ ಅರ್ಥ ಮಾಡಲಾಯಿತು.

ಮುಖ್ಯವಾಗಿ ಕೊರೋನ ವೈರಸ್ ಮೂರು ಬಾಗಿಲುಗಳ ಮೂಲಕ ನಮ್ಮ ದೇಹವನ್ನು ಪ್ರವೇಶ ಮಾಡುತ್ತವೆ. ಬಾಯಿ, ಮೂಗು ಮತ್ತು ಕಣ್ಣು. ದಿನದ ಯಾವುದೇ ಅವಧಿಯಲ್ಲಿ ನಮ್ಮ ಕೈಯು ಮೂಗು, ಕಣ್ಣು, ಬಾಯಿಗಳನ್ನು ಮುಟ್ಟದೆ ಇದ್ದರೆ ಮುಕ್ಕಾಲು ಭಾಗ ಕೊರೋನ ಗೆದ್ದ ಹಾಗೆ. ಆ ಪ್ರತಿಬಂಧಕ ಕ್ರಮವನ್ನು ಸಣ್ಣ ಮಕ್ಕಳಿಂದ ಆರಂಭಿಸಿ ದೊಡ್ಡವರವರೆಗೆ ಪ್ರತಿಯೊಬ್ಬರಿಗೆ ಮನವರಿಕೆ ಮಾಡಲಾಯಿತು. ಮನೆ ಒಳಗೂ ಮತ್ತು ಹೊರಗೂ ಜನರು ಸ್ವಯಂ ನಿಯಂತ್ರಣಕ್ಕೆ ಮುಂದಾದರು. ಎರಡು ಪದರದ ಮಾಸ್ಕ್ ಎಲ್ಲರಿಗೂ ಉಚಿತವಾಗಿ ದೊರೆಯಿತು. ಯಾವುದನ್ನೂ ಕಾನೂನು ಮೂಲಕ ಹೇರುವುದನ್ನು ಮಾಡದೆ ಜನರು ಸ್ವಯಂ ಆಗಿ ನಿಯಮಗಳನ್ನು ಪಾಲಿಸುವ ಹಾಗೆ ಮಾಡಲಾಯಿತು. ಅದರಿಂದಾಗಿ ಉತ್ತರ ಕೊರಿಯಾ ಕೊರೋನ ಗೆದ್ದಿತು. ಅದು ನಮಗೆ ಪಾಠ ಆದೀತು.

ಭಾರತದಂತಹ ಭಾರೀ ಜನಸಂಖ್ಯೆಯ ರಾಷ್ಟ್ರದಲ್ಲಿ ಇದನ್ನು ಮಾಡಲು ಸ್ವಲ್ಪ ಕಷ್ಟ ಆಗಬಹುದು. ಆದರೂ ಜನರಲ್ಲಿ ಅರಿವು ಮೂಡಿಸುವ ಕೆಲಸ ಸರಕಾರಗಳು ಹೆಚ್ಚು ಮಾಡಿದರೆ, ಜನರು ಕೂಡ ತಮ್ಮ ಸ್ವಚ್ಛಂದ ಪ್ರವೃತ್ತಿಗಳಿಗೆ ಸ್ವಲ್ಪ ಕಡಿವಾಣ ಹಾಕಿದರೆ, ಲಸಿಕೆ ಸ್ವಲ್ಪ ಹೆಚ್ಚು ವೇಗವಾಗಿ ಎಲ್ಲರಿಗೂ ದೊರೆತರೆ ಭಾರತವು ಕೂಡ ಕೊರೋನ ಗೆಲ್ಲಬಹುದು. ಆದರೆ ನಮ್ಮಲ್ಲಿ ಸುದ್ದಿ ಮಾಧ್ಯಮಗಳಿಂದ ಹಿಡಿದು, ಸಾಮಾಜಿಕ ಮಾಧ್ಯಮಗಳು, ವಿಪಕ್ಷದವರು, ಆಸ್ಪತ್ರೆಗಳು ಎಲ್ಲರೂ ಮಾಡಿದ್ದು ಭಯವನ್ಮು ಬಿತ್ತುವ ಕೆಲಸ. ಎಷ್ಟೋ ಜನ ಬರಿ ಕೊರೋನ ಭಯದಿಂದಲೇ ಸತ್ತಿದ್ದಾರೆ ಎನ್ನುವುದು ನಿರಾಕರಿಸಲಾಗದ ವಾಸ್ತವ. ಕೊರಿಯ ಬಗ್ಗೆ ಉಳಿದ ಸುದ್ದಿಗಳು ಏನೇ ಇರಲಿ ಕೊರೋನ ನಿರ್ವಹಣೆ ಕುರಿತಂತೆ ಕಲಿಯಬೇಕಾದ ಪಾಠ ಬಹಳಷ್ಟಿದೆ.

















































































error: Content is protected !!
Scroll to Top