ಕೆನರಾ ಬ್ಯಾಂಕ್ ನೌಕರರ ಯೂನಿಯನ್ ಸ್ಥಾಪಕ ಸದಸ್ಯರಾಗಿದ್ದ ಕೆ.ಪಿ. ಅನಂತಪ್ರಭು
ಕಾರ್ಕಳ : ಕಾರ್ಕಳ ಪುರಸಭೆ ವ್ಯಾಪ್ತಿಯ ಹವಲ್ದಾರ್ ಬೆಟ್ಟುವಿನ ಕೆ.ಪಿ. ಅನಂತ ಪ್ರಭು (84) ಹಾಗೂ ಅವರ ಪತ್ನಿ ಕೆ.ಪಿ. ಪದ್ಮಾ ಪ್ರಭು (82) ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೇ 31ರಂದು ಹವಾಲ್ದಾರ್ ಬೆಟ್ಟು ಮನೆಯಲ್ಲಿ ವೃದ್ಧ ಪತಿ ಪತ್ನಿ ವಿಷ ಪದಾರ್ಥ ಸೇವಿಸಿದ್ದರು. ಬಳಿಕ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದ ಅನಂತ ಪ್ರಭು ಜೂ. 1ರಂದು ಬೆಳಗ್ಗೆ 11 ಗಂಟೆಗೆ ಹಾಗೂ ಪದ್ಮಾ ಅವರು ಮಧ್ಯಾಹ್ನ 12 ಗಂಟೆ ವೇಳೆಗೆ ಮೃತಪಟ್ಟಿರುತ್ತಾರೆ. ಪದ್ಮಾ ಅವರು ಅನಾರೋಗ್ಯದಿಂದ ಬಳಲುತಿದ್ದ ಕಾರಣದಿಂದ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅನಂತ ಪ್ರಭು ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪುತ್ರ ದಿನೇಶ್ ಪ್ರಭು ಹಾಗೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವ ಜಗದೀಶ್ ಪ್ರಭು ಅವರನ್ನು ಅಗಲಿದ್ದಾರೆ.
ಉದ್ಯಮಿಯಾಗಿದ್ದರು
ಕೆನರಾ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದ ಅವರು ಕೆನರಾ ಬ್ಯಾಂಕ್ ನೌಕಕರ ಯೂನಿಯನ್ ಸ್ಥಾಪಕ ಸದಸ್ಯರಲ್ಲಿ ಓರ್ವರಾಗಿದ್ದರು. ಉದ್ಯೋಗಕ್ಕೆ ರಾಜೀನಾಮೆ ನೀಡಿದ ಬಳಿಕ ಬಸ್ ಉದ್ಯಮ ಪ್ರಾರಂಭಿಸಿದ್ದರು. ಅನಂತರ ಕಾರ್ಕಳದಲ್ಲಿ ಪಾತ್ರೆ ಮಳಿಗೆ ತೆರೆದು ಉದ್ಯಮ ನಡೆಸುತ್ತಿದ್ದರು.
ನೇರ ನಡೆ ನುಡಿಯಿಂದಲೇ ಗುರುತಿಸಿಕೊಂಡಿದ್ದ ಅನಂತಪ್ರಭು ಅವರು ಸಾಮಾಜಿಕ, ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಅನ್ಯಾಯಕ್ಕೀಡಾದವರಿಗೆ ನೆರವಾಗುತ್ತಿದ್ದರು. ಅವರ ಪರವಾಗಿ ಧ್ವನಿಯೆತ್ತಿ ಹೋರಾಟ ಮಾಡುತ್ತಿದ್ದರು. ಅಪಘಾತದಲ್ಲಿ ತೊಂದರೆಗೀಡಾದವರಿಗೂ ಕಾನೂನು ಮಾಹಿತಿ ನೀಡುತ್ತಿದ್ದರು ಎಂದು ಅವರ ಸ್ನೇಹಿತ ನಿವೃತ್ತ ಬ್ಯಾಂಕ್ ಉದ್ಯೋಗಿ ಗೋವರ್ಧನ್ ಭಾಗ್ವತ್ ನ್ಯೂಸ್ ಕಾರ್ಕಳಕ್ಕೆ ತಿಳಿಸಿದರು.









































